
ಆಪ್ತಮಿತ್ರರ ರಾಜಕೀಯ ಯುದ್ಧ ; ಪರಸ್ಪರ ಆರೋಪ, ಪ್ರತ್ಯಾರೋಪ

ಬೆಂಗಳೂರು : ಒಂದು ಕಾಲದಲ್ಲಿ ರಾಮ, ಲಕ್ಷ್ಮಣರಂತಿದ್ದ ಬಳ್ಳಾರಿಯ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮಲು ಸಧ್ಯ ರಾಜಕೀಯ ವಿರೋಧಿಗಳಾಗಿ ಬದಲಾಗಿದ್ದಾರೆ. ಇಬ್ಬರು ನಾಯಕರು ಆರೋಪ, ಪ್ರತ್ಯಾರೋಪ ಮಾಡುವ ಮಟ್ಟಿಗೆ ಇವರ ರಾಜಕೀಯ ಜಗಳ ಬೀದಿಗೆ ಬಿದ್ದಿದೆ.
ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ ಅಗರವಾಲ್ ಅವರು ಶ್ರೀರಾಮಲು ವಿರುದ್ಧ ಕೆಲ ಆರೋಪ ಮಾಡಿದರು. ಸಂಡೂರು ಉಪ ಚುನಾವಣೆ ಸೋಲಿಗೆ ನಿಮ್ಮ ಸಹಕಾರ ಇಲ್ಲದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ. ಇದಕ್ಕೆ ಆಕ್ರೋಶ ಹೊರ ಹಾಕಿದ ರಾಮುಲು ಬೇಕಾದರೆ ಪಕ್ಷ ತ್ಯಾಗಕ್ಕೂ ಸಿದ್ಧ ಎಂಬ ಮಾತು ಆಡಿದ್ದರು.
ಅದಾದ ನಂತರ ನಿನ್ನೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ನನ್ನ ಬಗ್ಗೆ ಹೈಕಮಾಂಡ್ ನಾಯಕರಿಗೆ ಜನಾರ್ದನ ರೆಡ್ಡಿ ಸುಳ್ಳು ಆರೋಪ ಮಾಡಿದ್ದು ಇದೇ ಕಾರಣಕ್ಕೆ ರಾಜ್ಯ ಉಸ್ತುವಾರಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಕ್ಷಕ್ಕೆ ನನ್ನ ಅವಶ್ಯಕತೆ ಇಲ್ಲ ಎಂಬುದಾದರೆ ನಾನು ಪಕ್ಷ ಬಿಟ್ಟು ಹೋಗುವೆ ಎಂದು ಹೇಳಿದ್ದರು.
ಇಂದು ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ. ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಡಿ.ಕೆ ಶಿವಕುಮಾರ್ ಶ್ರೀರಾಮಲು ಅವರನ್ನು ಕಾಂಗ್ರೆಸ್ ಗೆ ಸೆಳೆಯುವ ಯತ್ನ ನಡೆಸಿದ್ದು, ಇದೇ ಕಾರಣಕ್ಕೆ ಶ್ರೀರಾಮಲು ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ ರಾಮಲುಗೆ ರಾಜಕೀಯವಾಗಿ ಮೇಲೆ ಬರಲು ಸಾಕಷ್ಟು ಸಹಾಯ ಮಾಡಿದ್ದೇನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಯತ್ನಿಸಿದ್ದ ರಾಮಲುಗೆ ಬುದ್ದಿ ಹೇಳಿದ್ದು ನಾನೇ. ಅನೇಕ ಬಾರಿ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.
ಇದಕ್ಕೆ ಶ್ರೀರಾಮಲು ಪ್ರತಿಕ್ರಿಯೆ ನೀಡಿದ್ದು. ನನನ್ನು ಬೆಳೆಸಲು ರೆಡ್ಡಿ ಪಾತ್ರ ಏನು ಇಲ್ಲ. ನಾನು ಸ್ವಂತ ಶಕ್ತಿ ಮೇಲೆ ಬೆಳೆದಿದ್ದೇನೆ. ಜಾರಕಿಹೊಳಿ ಅವರನ್ನು ಮುಗಿಸಲು ನಾನು ಯಾರು. ಹೀಗೆ ನಾಲಿಗೆ ಹರಿಬಿಟ್ಟರೆ, ಅವರ ಬಂಡವಾಳವನ್ನೂ ಬಿಚ್ಚಿಡುವ ಕೆಲಸ ಮಾಡುತ್ತೇನೆ ಎಂದು ಪ್ರತ್ಯುತ್ತರ ನೀಡಿದ್ದಾರೆ.