Video – ಅಷ್ಟಕ್ಕೂ ಸತೀಶ್ ಜಾರಕಿಹೊಳಿ ಹೇಳಿದ್ದು ಏನು : ವಿವಾದದ ಬೆನ್ನಲ್ಲೇ ಸಾಹುಕಾರ್ ಸ್ಪಷ್ಟನೆ
ಬೆಳಗಾವಿ : ನಿಪ್ಪಾಣಿ ನಗರದಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ವಿತಿಯಿಂದ ಹಮ್ಮಿಕೊಂಡಿದ್ದ, ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮಾತೊಂದು ಸಧ್ಯ ವಿವಾದಾತ್ಮಕ ಸ್ವರೂಪ ಪಡೆದಿದೆ. ಅಷ್ಟಕ್ಕೂ ಶಾಸಕ ಸತೀಶ್ ಆಡಿದ್ದ ಮಾತು ಯಾವುದು ಎಂಬುದರ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿತ್ತ. ಸಂವಿಧಾನದ ಆಶಯ, ಅಂಬೇಡ್ಕರ್, ಬಸವೇಶ್ವರ ಹಾಗೂ ಗೌತಮ ಬುದ್ಧದ ವಿಚಾರಗಳ ಕುರಿತು ಮಾತನಾಡಿದರು. ಅದೇ ಸಂದರ್ಭದಲ್ಲಿ, ಹಿಂದೂ ಧರ್ಮದ ಕುರಿತು ಮಾತನಾಡಿದ ಅವರು. ಹಿಂದೂ ಎಂಬ ಶಬ್ದ ನಮ್ಮದಲ್ಲ. ಅದು ಪರ್ಷಿಯನ್ ಭಾಷೆಯಿಂದ ಬಂದಿದೆ. ಹಿಂದೂ ಪದದ ಅರ್ಥ ಅಶ್ಲೀಲವಾಗಿದ್ದು, ಇದರ ಅರ್ಥ ತಿಳಿದರೆ ನಾಚಿಕೆಯಾಗುತ್ತದೆ. ಈ ಕುರಿತು ಅನೇಕ ಕಡೆ ಮಹಾನ್ ಸಂತರು ಹೇಳಿದ್ದಾರೆ. ಈ ಕುರಿತು ನೀವು ಅಧ್ಯಯನ ಮಾಡಿ ಎಂದರು.
ಹಿಂದೂ ಶಬ್ದ ಪರ್ಷಿಯನ್ ಪದವಾಗಿದ್ದು ಅದು ನಿಮ್ಮ ಪದ ಹೇಗೆ ಆಯ್ತು. ಈ ವಿಷಯದಲ್ಲಿ ಚರ್ಚೆ ಆಗಬೇಕು. ಎಲ್ಲಿಂದಲೋ ತಂದ ಪದವನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ. ಅದರ ಅರ್ಥ ತಿಳಿದರೆ ನಿಮಗೆ ನಾಚಿಕೆಯಾಗುತ್ತದೆ ಎಂದು ಹೇಳಿದರು.
ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದು ಬಹಳ ಮುಖ್ಯ. ಅವನು ಆ ಜಾತಿ ಈ ಜಾತಿ ಎಂದು ಮುಟ್ಟಿಸಿಕೊಳ್ಳುವುದಿಲ್ಲ. ಇಂತಹ ಅನಿಷ್ಟ ಪದ್ಧತಿಗಳು ಅಳಿಯಬೇಕು. ಅದಕ್ಕಾಗಿಯೇ ನಮ್ಮ ಹೋರಾಟ, ದಲಿತ ನೀರು ಮುಟ್ಟಿದರೆ ಅಶುದ್ಧ ಅಂತಾರೆ. ಅದೇ ಒಂದು ಎಮ್ಮೆ ಬೆಳಗ್ಗೆಯಿಂದ ಸಂಜೆವರೆಗೂ ನೀರಲ್ಲೇ ಇರುತ್ತೆ. ಇದರ ವಿರುದ್ಧ ನಮ್ಮ ಹೋರಾಟವಿದೆ ಎಂದರು.
ಗುಡಿ ಕಟ್ಟುವವರೂ ನಾವೇ, ದೇಣಿಗೆ ಕೊಡುವವರೂ ನಾವು. ದೇಗುಲ ಸಿದ್ದವಾದ ಮೇಲೆ ದಲಿತರಿಗೆ ಅಲ್ಲಿ ಪ್ರವೇಶ ಇಲ್ಲ ಅಂತೀವಿ. ದೇವಸ್ಥಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿ. ಶಿಕ್ಷಣ ಹಾಗೂ ಜ್ಞಾನ ಮಾತ್ರ ನಮ್ಮನ್ನು ಬದುಕಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಬರುವ ಜ್ಞಾನ ಬಹಳ ಮುಖ್ಯ ಎಂದು ಹೇಳಿದರು.
ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್ ಇರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್ ತಯಾರಿಸಿದ್ದರು ಎಂದು ಹೇಳಿದರು.
ಪ್ರತಾಪಗಢ ಕೋಟೆಯಲ್ಲಿ ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ನಮ್ಮ ಇತಿಹಾಸ ಬೇರೆ ಇದೆ. ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಬೇರೆ ರೀತಿ ತೋರಿಸಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸತೀಶ್ ಜಾರಕಿಹೊಳಿ ಹೇಳಿಕೆ ವಿರೋಧಿಸಿದ ಸುರ್ಜೇವಾಲಾ ಹಾಗೂ ಡಿ.ಕೆ ಶಿವಕುಮಾರ
ಸತೀಶ್ ಜಾರಕಿಹೊಳಿ ಹೇಳಿಕೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹಿಂದೂ ಧರ್ಮ ಜೀವನದ ವಿಧಾನವಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳೂ, ನಂಬಿಕೆ ಮೇಲೆ ವಿಶ್ವಾಸ ಹೊಂದಿದೆ. ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್ ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟನೆ ನೀಡಿರುವ ಶಾಸಕ ಸತೀಶ್ ಜಾರಕಿಹೊಳಿ –
ಇನ್ನೂ ಈ ಕುರಿತಾಗಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಸತೀಶ್ ಜಾರಕಿಹೊಳಿ. ಈ ದೇಶದ ಸಮಗ್ರ ಇತಿಹಾಸ ಓದಿಕೊಂಡಾಗ ಮಾತ್ರ ನಮಗೆ ಅದರ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಿಂದೂ ಧರ್ಮದ ವ್ಯಾಖ್ಯಾನವನ್ನು ಈ ನಾಡಿನಲ್ಲಿ ಅನೇಕರು ನೀಡಿದ್ದಾರೆ. ನಾರಾಯಣಗುರುಗಳು ತಮ್ಮದೇ ಒಂದು ಅಭಿಪ್ರಾಯ ಮಂಡಿಸಿದ್ದಾರೆ. ಈ ಕುರಿತು ಅರಿತುಕೊಂಡು ಚರ್ಚೆ ನಡೆಸಲಿ.
ನಾನು ಯಾವುದೇ ಒಂದು ಧರ್ಮ ಹಾಗೂ ಜಾತಿಯ ಮೇಲೆ ನಂಬಿಕೆ ಇಟ್ಟುಕೊಂಡವನಲ್ಲ. ನನ್ನದೆ ಆದ ವೈಯಕ್ತಿಕ ಅಭಿಪ್ರಾಯ ಹೊಂದಿದ್ದೇನೆ. ಸುಮ್ಮನೇ ಒಂದು ವಿಷಯದ ಮೇಲೆ ಜನರಿಗೆ ತಪ್ಪು ಸಂದೇಶ ನೀಡುವ ಕೆಲಸ ನಡೆಯಬಾರದು. ಮಾಧ್ಯಮಗಳು ಈ ಕುರಿತು ನಿಖರ ಮಾಹಿತಿಯನ್ನು ಜನಕ್ಕೆ ತೋರಿಸಬೇಕು ಎಂದು ಹೇಳಿದ್ದಾರೆ.