ಪಾಲಿಕೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರ ಕಡೆಗಣನೆ: ಬಿಜೆಪಿ ವಿರುದ್ಧ ಸಿಡಿದೆದ್ದ ಸಮುದಾಯ
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ವೀರಶೈವ ಲಿಂಗಾಯತರಿಗೆ ಕಡೆಗಣನೆ ಮಾಡಿರುವುದನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ತೀವ್ರವಾಗಿ ಖಂಡನೆ ಮಾಡಿದೆ.ಶಿವಬಸವ ನಗರದಲ್ಲಿರುವ ಲಿಂಗಾಯತ ಭವನದಲ್ಲಿ ಸಭೆ ನಡೆಸಿ ಮುಖಂಡರು ಆಕ್ರೋಶ ಹೊರ ಹಾಕಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತಲತಲಾಂತರದಿಂದ ಬಿಜೆಪಿಯನ್ನು ಬೆಂಬಲಿಸಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯತರಿಗೆ ಕೇವಲ ದೊಡ್ಡ ಚುನಾವಣೆಯಲ್ಲಿ ಮಾತ್ರ ಶಾಸಕರುಗಳಿಗೆ ಅಧಿಕಾರಕ್ಕೆ ತರುವಲ್ಲಿ ಮಾತ್ರ ನಮ್ಮ ಸಂಘಟನೆಯನ್ನು ಬಳಸಿಕೊಂಡು ಪಾಲಿಕೆ ಚುನಾವಣೆಯಲ್ಲಿ ಕಡೆಗಣಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಬರುವ ಚುನಾವಣೆಯಲ್ಲಿ ಯಾವ ರೀತಿ ಪಾತ್ರ ವಹಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅಲ್ಲದೆ, ನಮ್ಮ ಸಮುದಾಯ ಯಾವ ರೀತಿಯ ಕ್ರಮವನ್ನು ಕೈಗೊಂಡು ಕಡೆಗಣನೆ ಮಾಡಿರುವ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ನಿರ್ಧಾರವನ್ನು ಬೆಳಗಾವಿ ವೀರಶೈವ ಮಹಾಸಭಾದ ಅಧ್ಯಕ್ಷ ರತ್ನಪ್ರಭಾ ಬೆಲ್ಲದ ನೇತೃತದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಣ್ಣಾಸಾಹೇಬ ಕೊರಬು, ಶೈಲಾ ಸಂಸುದಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚೇತನ ಅಂಗಡಿ, ಮಹಾಂತ ವಕ್ಕುಂದ, ರಾಜಕುಮಾರ ಟೋಪಣ್ಣವರ, ಸುಜೀತ ಮುಳಗುಂದ ಸೇರಿದಂತೆ ಮೊದಲಾದವರು ಇದ್ದರು.