ಅಧಿಕಾರ ಸಿಗದಿದ್ದರೂ ಪರವಾಗಿಲ್ಲ ನಾಡದ್ರೋಹಿಗಳ ಜತೆ ಕೈಜೋಡಿಸಬೇಡಿ: ಚಂದರಗಿ ಒತ್ತಾಯ
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೊದಲಬಾರಿಗೆ ರಾಜಕೀಯ ಪಕ್ಷಗಳು ಚಿನ್ಹೆಯ ಆಧಾರದ ಮೆಲೆ ಸ್ಪರ್ಧೆ ಮಾಡಿದ್ದು, ನಾಡದ್ರೋಹಿ ಎಂಇಎಸ್ ಅನ್ನು ಅಧಿಕಾರದಿಂದ ದೂರ ಇಡುವ ಕೆಲಸ ಮಾಡಬೇಕೆಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಇವರು. ಮಹಾನಗರ ಪಾಲಿಕೆ ಚುನಾವಣೆ ನಂತರ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಎಂಇಎಸ್ ಜೊತೆ ಕೈಜೋಡಿಸಬಾರದು, ಯಾವುದೇ ಕಾರಣಕ್ಕೂ ನಾಡದ್ರೋಹಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತವೆ ಎಂದರು.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾಗಿ ಬೇರೆ ರಾಜಕೀಯ ಪಕ್ಷಗಳು ಸ್ವಂತ ಬಲದ ಮೆಲೇ ಅಧಿಕಾರ ಹಿಡಿದರೆ ಯಾವುದೇ ತೊಂದರೆ ಇಲ್ಲ. ಒಂದುವೇಳೆ ಯಾರಿಗೂ ಸ್ಪಷ್ಟ ಬಹುಮತ ಬರದಿದ್ದರೆ ಯಾವುದೇ ಕಾರಣಕ್ಕೂ ಎಂಇಎಸ್ ಗೆ ಬೆಂಬಲ ನೀಡಬಾರದು. ಅವರ ಜೊತೆ ಸರ್ಕಾರ ರಚಿಸಿದ್ದೇ ಆದರೆ ಮುಖ್ಯಮಂತ್ರಿಗಳಿಗೆ ಈ ಕುರಿತು ಮಾಹಿತಿ ನೀಡಲಿದ್ದೇವೆ ಎಂದರು. ಚುನಾವಣೆ ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಕನ್ನಡಕ್ಕೆ ಬೆಂಬಲ ನೀಡುವ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕನ್ನಡ ಪರ ಸಂಘಟನೆ ಸದಸ್ಯರು ಕೈಗೊಳ್ಳಲಿದ್ದಾರೆ ಎಂದರು.
ನಾಡದ್ರೋಹಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ : ಸೋಶಿಯಲ್ ಮೀಡಿಯಾದಲ್ಲಿ ಎಂಇಎಸ್ ಬೆಂಬಲಿತ ಜನರು ಕನ್ನಡದ ಧ್ವಜ ಹಾಗೂ ಭಾಷೆ ವಿಚಾರವಾಗಿ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕೆಲಸ ಮಾಡುತ್ರೇವೆ ಎಂದರು. ಕನ್ನಡಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವ ಪೊಲೀಸ್ ಅಧಿಕಾರಿಗಳು, ನಾಡದ್ರೋಹಿ ಹೇಳಿಕೆ ನೀಡುವ ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ದೀಪಕ್ ಗುಡಗನಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.