
ಹೆಬ್ಬಾಳಕರ್ ಕಾರು ಅಪಘಾತ ; ಆಸ್ಪತ್ರೆಗೆ ಓಡಿಬಂದ ಪತಿ ರವೀಂದ್ರ ಹೆಬ್ಬಾಳಕರ್

ಬೆಳಗಾವಿ : ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯ ವಿಚಾರಿಸಲು ಪತಿ ರವೀಂದ್ರ ಹೆಬ್ಬಾಳಕರ್ ಆಸ್ಪತ್ರೆಗೆ ಧಾವಿಸಿದರು.
ಪತ್ನಿಗೆ ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ರವೀಂದ್ರ ಹೆಬ್ಬಾಳಕರ್ ನಗರದ ಡಾ. ರವಿ ಪಾಟೀಲ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಕಾರಂಜಿ ಮಠದ ಸ್ವಾಮೀಜಿ ಸೇರಿದಂತೆ ಸಚಿವರ ಅಭಿಮಾನಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಘಟನೆ ವಿವರ : ನಿನ್ನೆ ತಡರಾತ್ರಿ ವರೆಗೂ ಸಿ ಎಲ್ ಪಿ ಸಭೆ ಮುಗಿಸಿಕೊಂಡು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ಕಡೆಗೆ ಬರುವ ಸಂದರ್ಭದಲ್ಲಿ ಬೆಳಗಿನ ಐದು ಗಂಟೆಗೆ ಕಿತ್ತೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬೆಂಗಳೂರಿನಿಂದ ವಿಮಾನ ಮೂಲಕ ಬೆಳಗಾವಿಗೆ ಬರಬೇಕಿದ್ದ ಸಚಿವರು ಸಂಕ್ರಮಣ ಹಿನ್ನಲೆಯಲ್ಲಿ ಬೆಳಗಿನ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗುವ ಉದ್ದೇಶದಿಂದ ಕಾರಿನ ಮೂಲಕ ಬರುತ್ತಿದ್ದರು. ಬೆಳಗ್ಗೆ ಐದು ಘಂಟೆ ಸಂದರ್ಭದಲ್ಲಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದೆ.
ಲಾರಿ ತಪ್ಪಿಸಲು ಹೋದ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಗೆ ಇಳಿದಿದ್ದು ಮುಂದಿದ್ದ ಮರಕ್ಕೆ ರಭಸವಾಗಿ ಗುದ್ದಿದೆ. ಈ ಸಂದರ್ಭದಲ್ಲಿ ಕಾರಿನ ಏರ್ ಬ್ಯಾಗ್ ತಗೆದುಕೊಂಡ ಹಿನ್ನಲೆಯಲ್ಲಿ ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಹೋದರ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಇದ್ದರು.