
ತಪ್ಪಿದ ಅನಾಹುತ ; ಕೂದಲೆಳೆ ಅಂತರದಲ್ಲಿ ಪಾರಾದ ಸಚಿವೆ ಹೆಬ್ಬಾಳಕರ್

ಬೆಳಗಾವಿ : ನಿನ್ನೆ ತಡರಾತ್ರಿ ವರೆಗೂ ಸಿ ಎಲ್ ಪಿ ಸಭೆ ಮುಗಿಸಿಕೊಂಡು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ಕಡೆಗೆ ಬರುವ ಸಂದರ್ಭದಲ್ಲಿ ಬೆಳಗಿನ ಐದು ಗಂಟೆಗೆ ಕಿತ್ತೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬೆಂಗಳೂರಿನಿಂದ ವಿಮಾನ ಮೂಲಕ ಬೆಳಗಾವಿಗೆ ಬರಬೇಕಿದ್ದ ಸಚಿವರು ಸಂಕ್ರಮಣ ಹಿನ್ನಲೆಯಲ್ಲಿ ಬೆಳಗಿನ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗುವ ಉದ್ದೇಶದಿಂದ ಕಾರಿನ ಮೂಲಕ ಬರುತ್ತಿದ್ದರು. ಬೆಳಗ್ಗೆ ಐದು ಘಂಟೆ ಸಂದರ್ಭದಲ್ಲಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದೆ.
ಲಾರಿ ತಪ್ಪಿಸಲು ಹೋದ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಗೆ ಇಳಿದಿದ್ದು ಮುಂದಿದ್ದ ಮರಕ್ಕೆ ರಭಸವಾಗಿ ಗುದ್ದಿದೆ. ಈ ಸಂದರ್ಭದಲ್ಲಿ ಕಾರಿನ ಏರ್ ಬ್ಯಾಗ್ ತಗೆದುಕೊಂಡ ಹಿನ್ನಲೆಯಲ್ಲಿ ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಹೋದರ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಇದ್ದರು.
ಸಧ್ಯ ಒಂದು ಅನಾಹುತ ತಪ್ಪಿದ್ದು ಕೂದಲೆಳೆ ಅಂತರದಲ್ಲಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂ ಆಗಿದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ಸಚಿವೆ ಹೆಬ್ಬಾಳಕರ್ ಅವರನ್ನು ಬೆಳಗಾವಿಯ ರವಿ ಪಾಟೀಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಸಧ್ಯ ಹೆಬ್ಬಾಳಕರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆನ್ನಿನ ಎರಡು ಮೂಳೆಗಳು ಮುರಿತವಾಗಿವೆ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ. ಆಸ್ಪತ್ರೆ ವೈದ್ಯ ರವಿ ಪಾಟೀಲ್ ಅವರು ಹೆಬ್ಬಾಳಕರ್ ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದು ಯಾವುದೇ ಸಮಸ್ಯೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.