Video – ಸಾಹೇಬ್ರ ಮದುವೆ ಆಗ್ತಿಲ್ಲ ಹೆಣ್ಣು ಕೊಡಸ್ರಿ ; ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಯುವಕ
ಕೊಪ್ಪಳ : ಎಷ್ಟೇ ಹುಡುಕಿದರು ಯಾರು ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ. ಈ ಕಾರಣಕ್ಕೆ ದಯವಿಟ್ಟು ಹೆಣ್ಣು ಕೊಡಿಸುವಂತೆ ಯುವಕನೋರ್ವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಕನಕಗಿರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ನಳೀನ್ ಅತುಲ್ ನೇತೃತ್ವದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಯುವಕನೋರ್ವ ವಿಶಿಷ್ಠ ಮನವಿ ಸಲ್ಲಿಸುವ ಮೂಲಕ ಗಮನಸೆಳೆದಿದ್ದಾನೆ. ರೈತನಾಗಿರುವ ನನಗೆ ಯಾರೂ ಕನ್ಯೆ ಕೊಡುತ್ತಿಲ್ಲ. ಆ ಕಾರಣಕ್ಕೆ ದಯವಿಟ್ಟು ಜಿಲ್ಲಾಡಳಿತದ ವತಿಯಿಂದ ಹೆಣ್ಣು ಕೊಡಿಸುವಂತೆ ಮನವಿ ಮಾಡಿದ್ದಾನೆ.
ಯುವಕ ಮದುವೆ ಸಮಸ್ಯೆ ಎತ್ತುತ್ತಿದ್ದಂತೆ ಜಿಲ್ಲಾಧಿಕಾರಿ ನಳೀನ್ ಅತುಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಕೆಲಹೊತ್ತು ನಕ್ಕಿದ್ದಾರೆ. ನಂತರ ಯುವಕನ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನದ ಭರವಸೆ ನೀಡಿ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ಅಧಿಕಾರಿಗಳು ನಗೆಯಲ್ಲಿ ತೇಲಾಡಿದ್ದು ಗಮನಸೆಳೆಯಿತು.
ಯುವಕನ ಪ್ರಕಾರ ಸಧ್ಯ ರೈತ ಮಕ್ಕಳಿಗೆ ಕನ್ಯೆ ಸಿಗುವುದು ಕಷ್ಟಕರವಾಗಿದ್ದು, ಅದೆಷ್ಟೋ ಜನ ಮದುವೆಗೆ ಹುಡುಗಿಯನ್ನು ಹುಡುಕಿ ಸುಸ್ತಾಗುತ್ತಿದ್ದಾರೆ. ಇನ್ನೂ ಡಿಸಿ ಅವರಿಗೆ ಮನವಿ ಸಲ್ಲಿಸಿರುವ ಯುವಕನ ವಾದವೂ ಇದೇ ಆಗಿದ್ದು, ಕೊಪ್ಪಳ ಜಿಲ್ಲಾಡಳಿತ ಸಮಸ್ಯೆ ಪರಿಹರಿಸುತ್ತದಾ ಎಂಬುದನ್ನು ಕಾದು ನೋಡಬೇಕು.