ಬೊಮ್ಮಾಯಿ ಸರ್ಕಾರದ ನಾಡವಿರೋಧಿ ನಡೆ : ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟ್
ಬೆಳಗಾವಿ : ಕನ್ನಡ ನಾಡು ನುಡಿ ರಕ್ಷಣೆ ಹೋರಾಟದಲ್ಲಿ ಮುಂಚೂಣಿಯಾಗಿದ್ದ ಯುವ ಹೋರಾಟಗಾರರ ವಿರುದ್ಧ ರೌಡಿಶೀಟ್ ತೆರೆಯುವ ಮೂಲಕ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಾಡವಿರೋಧಿ ನಡೆ ಅನುಸರಿಸುತ್ತಿದೆಯಾ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ.
ಕಳೆದ 2021 ರಲ್ಲಿ ಮಹಾ ಮೇಳಾವ್ ಆಯೋಜಿಸಿದ್ದ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದಿದ್ದ ಹಾಗೂ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಹೋರಾಟದಲ್ಲಿ ಭಾಗವಹಿಸಿದ್ದ ಯುವ ಹೋರಾಟಗಾರರಾದ ಅನಿಲ್ ದಡ್ಡಿ ಹಾಗೂ ಸಂಪತ್ ಕುಮಾರ್ ದೇಸಾಯಿ ವಿರುದ್ಧ ರೌಡಿಶೀಟ್ ತೆರೆಯಲಾಗಿದ್ದು ನಗರ ಪೊಲೀಸರು ನೋಟೀಸ್ ಜಾರಿಗೊಳಿಸಿದ್ದಾರೆ.
ಸಂಪತಕುಮಾರ್ ದೇಸಾಯಿ ವಿರುದ್ಧ ನಗರದ ಎಂಪಿಎಂಸಿ ಪೊಲೀಸ್ ಠಾಣೆಯಿಂದ, ಅನಿಲ್ ದಡ್ಡಿ ಅವರಿಗೆ ಟಿಳಕವಾಡಿ ಪೊಲೀಸ್ ಠಾಣೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟಿಸ್ ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಬ್ಬರು ಸಾಕ್ಷಿಗಳ ಮುಚ್ಚಳಿಕೆ ಪಡೆಯಲು ಮುಂದಾಗಿದೆ.
ಸದಾಕಾಲವೂ ಕನ್ನಡಪರ ಧ್ವನಿ ಎತ್ತುವ ಮೂಲಕ ತಮ್ಮ ಯೌವನವನ್ನು ನಾಡಿಗೆ ಮುಡಿಪಾಗಿಟ್ಟ ಯುವಕರ ಪರ ನಿಲ್ಲಬೇಕಿದ್ದ ಬೊಮ್ಮಾಯಿ ಸರ್ಕಾರ ಈಗ ಅದೇ ಹೋರಾಟಗಾರರನ್ನ ರೌಡಿಗಳ ಮಟ್ಟಿಗೆ ನೋಡುವುದು ಎಷ್ಟು ಸರಿ? ಎಂಬುದು ಸಾರ್ವಜನಿಕೆ ವಾದವಾಗಿದೆ. ಸಧ್ಯ ಈ ಘಟನೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.