ಅರ್ಧದಲ್ಲೇ ಪಂದ್ಯ ತೊರೆದು ಆಸ್ಪತ್ರೆಗೆ ತೆರಳಿದ ಜಸ್‌ಪ್ರೀತ್ ಬುಮ್ರಾ
ಸಿಡ್ನಿ : ಆಸ್ಟ್ರೇಲಿಯಾ ಹಾಗೂ ಭಾರತದ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಮ್ಯಾಚ್ ಆಟದ ಮಧ್ಯೆ ಭಾರತದ ವೇಗದ ಬೌಲರ್ ಹಾಗೂ ನಾಯಕ ಜಸ್‌ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದ ಬೆನ್ನಲ್ಲೇ ದೊಡ್ಡ ಆಘಾತ ಕೂಡ ಎದುರಾಗಿದೆ. ನಾಯಕ ಜಸ್‌ಪ್ರೀತ್ ಬುಮ್ರಾ(Jasprit Bumrah) ಗಾಯದ ಸಮಸ್ಯೆಯಿಂದ ಪಂದ್ಯದ ಮಧ್ಯದಲ್ಲೇ ಆಸ್ಪತ್ರೆ ಸೇರಿದ್ದಾರೆ.
ಬುಮ್ರಾ ಮೈದಾನ ತೊರೆದು ಕಾರು ಹತ್ತಿ ಆಸ್ಪತ್ರೆಗೆ ಹೊರಟಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಅವರಿಗೆ ಗಂಭೀರ ಗಾಯವಾಗಿರುವ ಅನುಮಾನ ಕಾಡಿದೆ.
ದ್ವಿತೀಯ ದಿನದಾಟದಲ್ಲಿ 8 ಓವರ್ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ಗಾಯಕ್ಕೆ ತುತ್ತಾದರು. ಸುಮಾರು ಅರ್ಧ ಗಂಟೆ ವೈದ್ಯಕೀಯ ತಂಡದೊಂದಿಗೆ ಚಿಕಿತ್ಸೆ ಪಡೆದರೂ ಚೇತರಿಕೆ ಕಾಣದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸದ್ಯ ಬುಮ್ರಾ ಗಾಯದ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಬುಮ್ರಾ ಹೊರಗುಳಿಯುತ್ತಿರುವುದು ಟೀಂ ಇಂಡಿಯಾಗೆ ಆತಂಕ ತಂದಿದೆ.