
ಕ್ಯಾನ್ಸರ್ ಆಸ್ಪತ್ರೆಗೆ 8 ಕೋಟಿ ₹ ದಾನ ; ಕಲಿಯುಗದ ಕರ್ಣ ಅಥಣಿಯ ವೈದ್ಯ

ಬೆಳಗಾವಿ : ಕೆಎಲ್ಇ ಸಂಸ್ಥೆಯ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಮೃತ ಹಸ್ತದಿಂದ ಉದ್ಘಾಟನೆ ಆಗಿದೆ. ಸಧ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ಎಲ್ಲರ ಗಮನಸೆಳೆದಿದ್ದಾರೆ.
ಹೌದು ಬೆಳಗಾವಿಯಲ್ಲಿ ನಿರ್ಮಾಣವಾದ ಕೆಎಲ್ಇ ನೂತನ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಬರೋಬ್ಬರಿ 8 ಕೋಟಿ ರೂ. ದಾನ ನೀಡಿರುವ ಈ ವ್ಯಕ್ತಿ ಸಂಪತ್ ಕುಮಾರ್ ಶಿವಣಗಿ. ಮೂಲತಃ ಅಥಣಿ ತಾಲೂಕಿನವರಾದ ಇವರು ಅಮೇರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಇವರು ಮಾಡಿರುವ ಮಹಾನ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಡಾ. ಸಂಪತ್ ಕುಮಾರ್ ಶಿವಣಗಿ ಬೆಳಗಾವಿ ಕೆಎಲ್ಇ ಆರ್.ಎಲ್.ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿ ನಂತರ ವೈದ್ಯಕೀಯ ಶಿಕ್ಷಣದಲ್ಲಿ ಎಂಡಿ ಪದವಿ ಪಡೆದುಕೊಂಡು ನಂತರ ಅಮೇರಿಕಾಕ್ಕೆ ತೆರಳಿದ್ದರು. ಅಮೇರಿಕದಲ್ಲಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಇವರು ವಿಕ್ಸಬರ್ಗ್ ಆಸ್ಪತ್ರೆಯಲ್ಲಿ ಗೈನಾಕಾಲಾಜಿಸ್ಟ್ ಆಗಿ ಯಶಸ್ವಿಯಾಗಿದ್ದಾರೆ.
ಅಮೇರಿಕಾದ ಪ್ರತಿಷ್ಠಿತ ವೈದ್ಯರಲ್ಲಿ ಒಬ್ಬರಾದ ಡಾ. ಸಂಪತ್ ಕುಮಾರ್ ಶಿವಣಗಿ ಅವರು ಅಲ್ಲಿನ ರಾಜಕೀಯ ನಾಯಕರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದಾರೆ. ಅಷ್ಟೇ ಅಲ್ಲದೇ ದಶಕಗಳಿಂದಲೂ ಹೋರಾಟದ ಮನೋಭಾವ ಬೆಳೆಸಿಕೊಂಡಿರುವ ಇವರದು ಅಪರೂಪದ ವ್ಯಕ್ತಿತ್ವ.
ತಾನು ಹುಟ್ಟಿ ಬೆಳೆದ ನಾಡಿಗೆ ಏನನ್ನಾದರೂ ಮಾಡಬೇಕು ಎಂಬ ಉದ್ದೇಶದಿಂದ ಕೆಎಲ್ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ 8 ಕೋಟಿ ರೂ ದಾನ ನೀಡಿದ್ದಾರೆ. ಇದೇ ಕಾರಣಕ್ಕೆ ಈ ಆಸ್ಪತ್ರೆಗೆ ಡಾ. ಸಂಪತ್ ಕುಮಾರ್ ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ಎಂದು ನಾಮಕರಣ ಮಾಡಲಾಗಿದೆ. ಸಧ್ಯ ಇವರ ಕಾರ್ಯಕ್ಕೆ ಜಿಲ್ಲೆಯ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.