
ಗೋಕಾಕ್ : ರೋಚಕ ಕಾರ್ಯಾಚರಣೆ ; ಹಂತಕರ ಬಂಧಿಸುವಲ್ಲಿ ಪೊಲೀಸರು ಯಶಸ್ವಿ…!

ಗೋಕಾಕ : ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಕ್ಕೆ ಹಿರಿಯರು ಬೈದು ಬುದ್ದಿ ಹೇಳಿದ್ದಕ್ಕೆ ಸಿಟ್ಟಿಗೆದ್ದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಕೇವಲ 24 ಗಂಟೆಯಲ್ಲಿ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕಾಶ ಮಾರುತಿ ಹಿರಟ್ಟಿ (26) ಎಂಬಾತ ಹೂಲಿಕಟ್ಟಿ ಶಿವಲಿಂಗೇಶ್ವರ ಜಾತ್ರೆ ಮುಗಿಸಿ ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಅಪರಿಚಿತರು ಅಡ್ಡಗಟ್ಟಿ ಕೊಲೆ ಮಾಡಿದ್ದರು. ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಳವಿ ಗ್ರಾಮದ ಮೃತ ಪ್ರಕಾಶ್ ಹಾಗೂ ಆತನ ಸ್ನೇಹಿತ ಕುಮಾರ ನಾಯಿಕ ಎಂಬಾತನ ಜೊತೆ ಡಿಸೆಂಬರ್ ನಲ್ಲಿ ಕೊಳವಿಯ ಗುಳಿಬಸವೇಶ್ವರ ಜಾತ್ರೆಯಲ್ಲಿ ಸಣ್ಣ ಜಗಳವಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಬುದ್ದಿವಾದ ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಕುಮಾರ್ ತನ್ನ ಏಳು ಜನ ಸ್ನೇಹಿತರ ಜೊತೆಗೂಡಿ ಪ್ರಕಾಶ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಳವಿ ಗ್ರಾಮದ ಕುಮಾರ್ ನಾಯಿಕ, ರವೀಂದ್ರ ಪಾತ್ರೊಟ್, ಉಮೇಶ್ ಕಂಬಾರ, ಅಭಿಷೇಕ ಪಾತ್ರೊಟ್, ಮನೋಜ್ ಪಾತ್ರೊಟ್, ಬೈಲಹೊಂಗಲದ ಮಾರುತಿ ವಡ್ಡರ್ ಸೇರಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶಬಾಬು ಆರ್.ಬಿ, ಪಿಎಸ್ಐ ಕಿರಣ್ ಮೋಹಿತೆ, ಎಎಸ್ಐ ಎಸ್.ಕೆ ಪಾಟೀಲ, ಎಫ್ ಕೆ ಗುರಣ್ಣಗೌಡರ, ಟಿ.ಎಸ್ ದಳವಾಯಿ ಸೇರಿದಂತೆ ಸಿಬ್ಬಂದಿಯ ಕರ್ತವ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.