ಬೆಳಗಾವಿಯ ಸಾಹಿತಿ ಗವಿಮಠ ಅವರಿಗೆ ಗಡಿನಾಡ ಚೇತನ ಪ್ರಶಸ್ತಿ
ಬೆಳಗಾವಿ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಈ ಬಾರಿಯ ಗಡಿನಾಡ ಚೇತನ ಪ್ರಶಸ್ತಿಗೆ ಬೆಳಗಾವಿಯ ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಸ್.ಗವಿಮಠ ಭಾಜನರಾಗಿದ್ದಾರೆ.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಪ್ರತ್ಯಕ್ಷ ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ಗುರುತಿಸಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿಯನ್ನು ಗವಿಮಠ ಅವರಿಗೆ ಲಭಿಸಿದೆ.
ಸೆ. 30 ರಂದು ಮಹಾರಾಷ್ಟ್ರದ ಜತ್ತ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗವಿಮಠ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು.
ಬೆಳಗಾವಿಯಲ್ಲಿ ನೆಲೆನಿಂತು ಕಳೆದ 50 ವರ್ಷಗಳಿಗೂ ಅಧಿಕ ಕಾಲ ಸಾಹಿತ್ಯ ಸೃಷ್ಟಿ ಮಾಡಿ 50ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ರಂಗಭೂಮಿಯ ಅಭಿವೃದ್ಧಿಗೆ ನಾಟಕ ಅಕೆಡಮಿ ಸದಸ್ಯರಾಗಿ ಮತ್ತು ರಂಗಭೂಮಿ ಸಹಕಾರಿ ಸಂಘದ ನಿರ್ದೇಶಕರಾಗಿ ಶ್ರಮಿಸಿದ್ದಾರೆ.
ಕೆಎಲ್‍ಇ ಸಂಸ್ಥೆಯ ಪ್ರಸಾರಾಂಗದ ನಿರ್ದೇಶಕರಾಗಿ, ವಾರ್ತಾಪತ್ರಿಕೆಯ ಸಂಪಾದಕರಾಗಿ ಸೇವೆ ನೀಡಿದ್ದಾರೆ. ಸಹಕಾರಿ ಸಂಘದ ನಿರ್ದೇಶಕರಾಗಿ, ವಚನ ಪಿತಾಮಹ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಬೆಳಕಿಗೆ ತಂದಂತೆ ಪ್ರತಿಷ್ಠಿತ ಕೆಎಲ್‍ಇ ಸಂಸ್ಥೆಯ ನೂರುವರ್ಷಗಳ ಇತಿಹಾಸವನ್ನು ರಚಿಸಿ ಬೆಳಕಿಗೆ ತಂದಿದ್ದಾರೆ.
ಏಕಕಾಲಕ್ಕೆ ನೂರು ಪುಸ್ತಕಗಳ ಪ್ರಕಟಣೆಯ ಕೀರ್ತಿಗೆ ಭಾಜನರಾದ ಗವಿಮಠರ ಯೋಗದಾನ ಮೌಲಿಕವೆನಿಸಿದೆ. ಬೆಳಗಾವಿಯಲ್ಲಿ 1980ರಲ್ಲಿ ಅಖಿಲ ಭಾರತ 52ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಂಟಿ ಕಾರ್ಯದರ್ಶಿಯಾಗಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಂಟಿ ಕಾರ್ಯದರ್ಶಿಯಾಗಿ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.
ಹಳೆಯ ಕನ್ನಡ ಸಾಹಿತ್ಯ ಭವನ ಮತ್ತು ನೂತನ ಕನ್ನಡ ಭವನಗಳ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಪ್ರಾ. ಗವಿಮಠರು ಬೆಳಗಾವಿಯ ಹತ್ತು ಹಲವಾರು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಆದರ್ಶಪ್ರಾಯರಾಗಿದ್ದಾರೆ.
ಪ್ರೊ. ಬಿ.ಎಸ್.ಗವಿಮಠ ಅವರು ಸರ್ಕಾರ ನೀಡುವ ಪ್ರತಿಷ್ಠಿತ ಗಡಿನಾಡ ಚೇತನ ಪ್ರಶಸ್ತಿಗೆ ಭಾಜನರಾಗಿರುವುದು ಸಮಸ್ತ ಕೆಎಲ್‍ಇ ಸಂಸ್ಥೆಗೆ ಲಭಿಸಿದಂತಾಗಿದೆ. ಗಡಿಭಾಗದಲ್ಲಿ ಕೆಎಲ್‍ಇ ಸಂಸ್ಥೆ ಮಾಡಿರುವ ಕನ್ನಡ ಸೇವೆಗೆ ದೊರೆತ ಗೌರವವೆನಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಗವಿಮಠ ಅವರನ್ನು ಅಭಿನಂದಿಸಿದ್ದಾರೆ.