ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಕಾಂತೇಶಗೆ ರಾಷ್ಟ್ರೀಯ ವ್ಯಂಗ್ಯಚಿತ್ರ ವಿಶೇಷ ಪುರಸ್ಕಾರ
ಧಾರವಾಡ : ಮೂಲತಃ ತಾಲೂಕಿನ ಅಮ್ಮಿನಬಾವಿ ಗ್ರಾಮದವರಾದ ಖ್ಯಾತ ವ್ಯಂಗ್ಯಚಿತ್ರಕಲಾವಿದ ಕಾಂತೇಶ ಎಂ. ಬಡಿಗೇರ ಅವರಿಗೆ ರಾಷ್ಟ್ರೀಯ ವ್ಯಂಗ್ಯಚಿತ್ರ ವಿಶೇಷ ಪುರಸ್ಕಾರ ಲಭಿಸಿದೆ.
ಛತ್ತೀಸಗಡ ಸರಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ‘ಕಾರ್ಟೂನ್ ವಾಚ್’ ನಿಯತಕಾಲಿಕೆ ‘ಪ್ರವಾಸಿಗರು ಭಯೋತ್ಪಾದಕರಿಗೆ ಹೆಸರುವದಿಲ್ಲ’ ಎಂಬ ವಿಷಯವಾಗಿ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ವ್ಯಂಗ್ಯಚಿತ್ರಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಾಂತೇಶ ಎಂ. ಬಡಿಗೇರ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಪ್ರಸಿದ್ಧ ವ್ಯಂಗ್ಯಚಿತ್ರಕಾರ್ತಿ ಮಾಯಾ ಕಾಮಾತ್ ಹೆಸರಲ್ಲಿ ಕೊಡಮಾಡುವ ಅಂತಾರಾಷ್ಟ್ರೀಯ ‘ಅತ್ಯುತ್ತಮ ಯುವ ರಾಜಕೀಯ ವ್ಯಂಗ್ಯಚಿತ್ರಕಾರ ಗೌರವ ಪ್ರಶಸ್ತಿ’ ಇವರಿಗೆ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಕಳೆದ 30 ವರ್ಷಗಳಿಂದ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದು, ಬೆಂಗಳೂರಿನಲ್ಲಿ ಜರುಗಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ತಮ್ಮ ವಿಶಿಷ್ಟ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ದು, ಹತ್ತು ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಆಯ್ಕೆಯಾಗಿ ಹೆಸರು ಸಾಕಷ್ಟು ಮಾಡಿವೆ.
ಹಲವಾರು ಕನ್ನಡ ಮತ್ತು ಆಂಗ್ಲ ಭಾಷಾ ದಿನಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಲಾವಿದರಾಗಿ ಸೇವೆಗೈದಿರುವ ಕಾಂತೇಶ ಬಡಿಗೇರ ಅವರು ಪ್ರಸ್ತುತ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆ ಮತ್ತು ‘ಕರ್ಮವೀರ’ ವಾರಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಲಾವಿದರಾಗಿ ಸೇವೆಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ವ್ಯಂಗ್ಯಚಿತ್ರ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿರುವ ಕಾಂತೇಶ ಬಡಿಗೇರ ಅವರನ್ನು ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕದ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಅಭಿನಂದಿಸಿದ್ದಾರೆ.


