ಅಪಮಾನದ ಕಹಿಯೊಂದು ಕಟ್ಟಿತು ಶಿಕ್ಷಣ ಸಂಸ್ಥೆ ; ಅಪರೂಪ ಸಾಧಕನ ಸ್ಟೋರಿ..!
ಬೆಂಗಳೂರು : ಬದುಕಿನಲ್ಲಿ ಸಾಧಿಸುವ ಛಲ ಬೇಕು. ಎದುರಿಸಿದ ಅವಮಾನಗಳನ್ನು ಮೆಟ್ಟಿನಿಂತು ನಂಬಿದವರೂ ಹಾಗೂ ಸಮಾಜಕ್ಕೆ ಸ್ಪೂರ್ತಿಯ ಚಿಲುಮೆಯಾಗಬೇಕು. ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ ಆದರೆ, ಅದೇ ಯೋಚನೆಯಲ್ಲಿ ಅಮೂಲ್ಯ ಸಮಯ ವ್ಯರ್ಥ ಮಾಡುವ ಬದಲು ಚಿಂತೆಗೆ ಕೊಡುವ ಸಮಯವನ್ನೇ ಬದುಕು ಕಟ್ಟಿಕೊಳ್ಳಲು ಉಪಯೋಗಿಸಿದರೆ ಏನು ಪಡೆಯಬಹುದು ಎಂಬುದಕ್ಕೆ ಈ ಉತ್ಸಾಹಿ ಯುವ ಸಾಧಕ ಸಾಕ್ಷಿ.
ಹೌದು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಳ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಜೆ.ಎಸ್ ಸಂತೋಷ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿದರು. ನಂತರ ಕಾಲೇಜು ಸೇರಿದಂತೆ ಪದವಿ ಶಿಕ್ಷಣ ಪೂರೈಸಿದರು. ಆದರೆ ಇವರಲ್ಲಿ ಶಿಕ್ಷಕರಾಗಬೇಕೆಂಬ ಹಂಬಲ ದಿನಗಳೆದಂತೆ ಹೆಚ್ಚಾಗುತ್ತಾ ಸಾಗತು.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ತಾವು ಅಂದುಕೊಂಡಂತೆ ಸಂತೋಷ್ ಅವರು ಶಿಕ್ಷಕ ವೃತ್ತಿ ಪ್ರಾರಂಭಿಸುತ್ತಾರೆ. ಕೇವಲ ಪಠ್ಯಗಳನ್ನು ಭೋದನೆ ಮಾಡುವುದನನ್ನೇ ಕಾಯಕವನ್ನಾಗಿಸಿಕೊಳ್ಳದೆ, ಮಕ್ಕಳಿಗೆ ಹೊಸ ಬಗೆಯ ವಿಶಿಷ್ಠ ಶೈಲಿಯಲ್ಲಿ ಪಾಠದ ಜೊತೆ ಪಠ್ಯೇತರ ಚಟುವಟಿಕೆ ಹೇಳಿಕೊಡುವ ಮೂಲಕ ಮಕ್ಕಳ ಮನಸ್ಸು ಗೆಲ್ಲುವಲ್ಲಿ ಬಹುಬೇಗ ಯಶಸ್ವಿಯಾಗುತ್ತಾರೆ.
ಆದರೆ ಸಂತೋಷ್ ಅವರು ಇತರರಂತೆ ತಿಂಗಳ ಸಂಬಳಕ್ಕೆ ದುಡಿದು ಹೊಟ್ಟೆಪಾಡಿಗಾಗಿ ಜೀವಿಸಿದ್ದರೆ ಅವರಿಗೆ ಯಾವ ತೊಂದರೆಯೂ ಬರುತ್ತಿರಲಿಲ್ಲ. ಆದರೆ ಇವರು ಹೆತ್ತ ತಂದೆ, ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ಶಿಕ್ಷಕನ ಕೈಯಲ್ಲಿ ನಂಬಿಕೆಯಿಟ್ಟು ಸಮರ್ಪಣೆ ಮಾಡಿರುವಾಗ ಅವರ ನಂಬಿಕೆಗೆ ಮೋಸವಾಗದಂತೆ ಶ್ರಮವಹಿಸಿ ಪಠ್ಯದ ಜೊತೆ ಮೌಲ್ಯಯುತ ಜೀವನಕ್ಕೆ ಒತ್ತು ಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಅನೇಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದಿನಗಳೆದಂತೆ ತಾವು ಕೆಲಸ ಮಾಡುವ ಶಿಕ್ಷಣ ಸಂಸ್ಥೆಯಲ್ಲಿನ ಕೆಲವರ ಹೊಟ್ಟೆಕಿಚ್ಚು ದಿನ, ದಿನವೂ ಹೆಚ್ಚುತ್ತಾ ಸಾಗುತ್ತದೆ. ಸಂತೋಷ್ ಅವರ ಮೇಲೆ ಆರೋಪ ಹೊರಿಸುತ್ತ ಮೇಲಿನವರ ಕಿವಿ ಚುಚ್ಚುವ ಕೆಲಸ ಸಾಗುತ್ತದೆ. ಅಷ್ಟೇ ಅಲ್ಲದೆ ಸಂತೋಷ್ ಅವರಿಗೆ ಕಿರುಕುಳ ನೀಡುತ್ತಾ ಅವಮಾನಿಸುವ ಅವರ ಕೃತ್ಯಕ್ಕೆ ಇವರು ಅಕ್ಷರಶಃ ಕುಗ್ಗಿ ಹೋಗುತ್ತಾರೆ. ಸಂಬಳಕ್ಕಾಗಿ ಕೆಲಸ ಮಾಡದೆ ವೃತ್ತಿ ಧರ್ಮದ ಶ್ರೇಷ್ಠತೆ ಕಾಪಾಡುವ ದೃಷ್ಟಿಯಿಂದ ಇವರು ರಾಜೀನಾಮೆ ನಿರ್ಧಾರಕ್ಕೆ ಬರುತ್ತಾರೆ.
ಅವಮಾನಕ್ಕೆ ಪ್ರತಿಯಾಗಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ
ಜೆ.ಎಸ್ ಸಂತೋಷ್ ಅವರಿಗೆ ಹಿಂದೆ ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆ ಮಾಡಿದ್ದ ಅನುಮಾನಕ್ಕೆ ಒಂದು ದೃಢವಾದ ನಿರ್ಧಾರ ಹೊರಹೊಮ್ಮುತ್ತದೆ. ತಮಗಾದ ಅನ್ಯಾಯ ಇನ್ನೊಬ್ಬರಿಗೆ ಆಗಬಾರದು ಎಂಬ ಉದ್ದೇಶದಿಂದ ಸಂತೋಷ್ ಅವರು ತಮ್ಮದೇ ಒಂದು ಶಿಕ್ಷಣ ಸಂಸ್ಥೆ ಪ್ರಾರಂಭಿಸುತ್ತಾರೆ. ಆಕ್ರೋಶದ ಕಿಡಿ ಕೇವಲ ಶಪಿಸುವುದಕ್ಕೆ ಬಳಕೆಯಾಗಿದೆ ಹೊಸ ಸಂಸ್ಥೆ ಹುಟ್ಟು ಹಾಕಲು ಯಶಸ್ವಿಯಾಗಿದ್ದು ಸಾಧನೆಯೇ ಸರಿ.
ಬೆಂಗಳೂರಿನ ಅತ್ತಿಬೆಲೆಯಲ್ಲಿ “ ಎ ಕಿಡ್ಜ್ ಫ್ರೀಸ್ಕೂಲ್ ” ಹೆಸರಿನ ವಿದ್ಯಾಸಂಸ್ಥೆ ಪ್ರಾರಂಭಿಸುತ್ತಾರೆ. ತಿಂಗಳ ಸಂಬಳಕ್ಕೆ ದುಡಿಯುವ ಸಂದರ್ಭದಲ್ಲಿ ಅವಮಾನ ಮಾಡಿದ್ದರ ಕಿಚ್ಚಿನಿಂದ ಸಂಸ್ಥೆ ಕಾರ್ಯ ಪ್ರಾರಂಭಿಸುತ್ತದೆ. ಆರಕ್ಕೂ ಅಧಿಕ ಕೈಗಳಿಗೆ ಕೆಲಸ ಕೊಟ್ಟು ಅವರನ್ನು ಕೆಲಸದವರಂತೆ ನೋಡದೆ ಎಲ್ಲರನ್ನೂ ತಮ್ಮ ಮನೆಯ ಸದಸ್ಯರು ಎಂಬುವಂತೆ ಗೌರವದಿಂದ ನಡೆದುಕೊಳ್ಳುವ ಇವರ ನಡೆಗೆ ಪೋಷಕರು ಸೇರಿದಂತೆ ಎಲ್ಲರೂ ಖುಷಿಪಡುತ್ತಾರೆ.
ಎ ಕಿಡ್ಜ್ ಫ್ರೀಸ್ಕೂಲಿನ ವಿಶೇಷತೆ ಏನು…..?
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ಶಿಕ್ಷಣದ ಕುರಿತು ಒಲವು ಹೆಚ್ಚಾಗಲಿ. ಹಾಗೆಯೇ ಮೌಲ್ಯಯುತ ಶಿಕ್ಷಣ ದೊರೆಯಲಿ ಎಂಬ ಉದ್ಧೇಶ ಹೊಂದಿರುತ್ತಾರೆ. ಅದರಂತೆ ಸಂಸ್ಥೆಯ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅವರು ನರ್ಸರಿ ಮಕ್ಕಳಿಗೆ ಅಕ್ಷರ ಜ್ಞಾನ, ಮೌಲ್ಯಯುತ ಶಿಕ್ಷಣ, ಸರಿ, ತಪ್ಪುಗಳ ಸಂಕ್ಷಿಪ್ತ ಪಾಠದ ಜೊತೆಗೆ ಮಕ್ಕಳಿಗೆ ಬಾಲ್ಯದಲ್ಲೇ ಪಠ್ಯದ ಕುರಿತು ಒಲವು ಮೂಡಿಸುವ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.
ಬಾಲ್ಯದಲ್ಲೇ ಮಕ್ಕಳಿಗೆ ನಮ್ಮ ದೇಶ, ಭಾಷೆ ಸಂಸ್ಕೃತಿ, ಕಲೆ, ಸಾಹಿತ್ಯದ್ಯದ ಕುರಿತು ಮೂಲ ಅಂಶಗಳ ಮಾಹಿತಿ ನೀಡಿದರೆ ವಿದ್ಯಾರ್ಥಿ ಬದುಕಿನ ಕಲಿಕೆಯ ಸಂದರ್ಭದಲ್ಲಿ ಆಸಕ್ತಿ ಬೆಳೆಯುತ್ತದೆ. ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ಪ್ರಾಯೋಗಿಕ ವಸ್ತು ಪ್ರದರ್ಶನದ ಹಾಗೂ ಸಂಗೀತ, ಉಡುಗೆಗಳ ಕುರಿತು ವಿಶಿಷ್ಠ ಕಾರ್ಯಕ್ರಮ ಮಾಡುತ್ತಾ ಮಕ್ಕಳಲ್ಲಿ ಕೌಶಲ್ಯ ಹೆಚ್ಚಿಸುವ ಕೆಲಸ ಈ ಶಾಲೆ ಮಾಡುತ್ತಿರುವುದು ಮತ್ತೊಂದು ವಿಶೇಷ.
ಹಿಂದೆ ನಡೆದ ಕಹಿ ಘಟನೆಗಳನ್ನು ಸಾಧನೆಯ ಮೆಟ್ಟಿಲಾಗಿ ಬಳಸಿಕೊಳ್ಳುವಂತೆ ತಂದೆ, ತಾಯಿ ಹಾಗೂ ಹಿತೈಷಿಗಳು ಕೊಟ್ಟ ಆತ್ಮಸ್ಥೈರ್ಯ ನನ್ನ ಹೊಸ ಕೆಲಸಕ್ಕೆ ಸಹಕಾರಿಯಾಯ್ತು. ಬದುಕಿನಲ್ಲಿ ಮಾಡಬೇಕಾಗಿರುವುದು ಸಾಕಷ್ಟು ಇದೆ. ಆದರೆ ಇನ್ನೊಬ್ಬರಿಗೆ ಕೆಡಕು ಬಯಸದೆ ಅತ್ಯಂತ ಶ್ರೇಷ್ಠ ಕಾಯಕವಾದ ಶಿಕ್ಷಕ ವೃತ್ತಿಯನ್ನು ಗೌರವಿಸಿ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನದತ್ತ ಗುರಿ ಇಟ್ಟುಕೊಂಡು ಬದುಕು ಸಾಗಿಸುತ್ತಿರುವೆ.
ಜೆ.ಎಸ್ ಸಂತೋಷ್
ಪ್ರಾಂಶುಪಾಲರು, ಎ ಕಿಡ್ಸ್ ಫ್ರೀಸ್ಕೂಲ್