
ಸವದತ್ತಿ ಯಲ್ಲಮ್ಮ ದೇವಿಗೆ 4.5 ಲಕ್ಷ ಮೌಲ್ಯದ ಸೀರೆ ಸಮರ್ಪಣೆ

ಬೆಳಗಾವಿ : ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ 4.5 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಿದದ್ದ ಸೀರೆಯನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೊಟ್ಟದ ಅಡವಿಲಿಂಗ ಮಹಾರಾಜರು ಗುರುವಾರ ರಾತ್ರಿ ದೇವಿಗೆ ಸಮರ್ಪಿಸಿ ಭಕ್ತಿ ಮೆರೆದರು.
ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರರ ಸಂಕಲ್ಪದಂತೆ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೊಟ್ಟದ ಅಡವಿಲಿಂಗ ಮಹಾರಾಜರು ಸುಮಾರು 4.5 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಅರ್ಪಿಸಿದರು.
1955ರಲ್ಲಿ ಶಿವಯೋಗೀಶ್ವರರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ದೇವಿಗೆ ಇಂಥ ಸೀರೆ ನೀಡುವುದಾಗಿ ಬೇಡಿಕೊಂಡಿದ್ದರು. 70 ವರ್ಷಗಳ ನಂತರ, ರೇಷ್ಮೆಯಿಂದ ತಯಾರಿಸಿದ ಚಿನ್ನದ ಝರಿಗಳನ್ನು ಒಳಗೊಂಡ ಸೀರೆಯನ್ನು ದೇವಿಗೆ ಅರ್ಪಿಸಿ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಸಕಲ ಜೀವರಾಶಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ನಂತರ ದೇವಿಗೆ ಉಡಿ ತುಂಬಿ ಹರಕೆ ತೀರಿಸಿದ್ದು ಮಾತ್ರವಲ್ಲದೆ, ಶುಕ್ರವಾರ ಬೆಳಿಗ್ಗೆ ಮಡಿಭಜನೆ, ಧಾರ್ಮಿಕ ಸಭೆ ನೆರವೇರಿದವು. ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ಕಲಾವಿದರು ಭಜನೆ ಪ್ರಸ್ತುತಪಡಿಸಿದರು.