ಮೃತ ಪತ್ನಿಯ ಮೂರ್ತಿ ಪ್ರತಿಷ್ಠಾಪಿಸಿದ ಗಂಡ : ಅಪರೂಪದ ಘಟನೆಗೆ ಸಾಕ್ಷಿಯಾದ ಕುಂದಾನಗರಿ
ಬೆಳಗಾವಿ : ಗಂಡ ಹೆಂಡತಿ ಸಂಬಂಧ ಸಾವಿರ ವರ್ಷಗಳ ಅನುಬಂಧ ಎಂಬ ಮಾತಿದೆ. ಇದೇ ಮಾತಿನಂತೆ ನಡೆಯುತ್ತಿರುವ ವ್ಯಕ್ತಿಯೋರ್ವ ಹೆಂಡತಿ ಸಾವಿನ ನಂತರ ಅವಳ ಮೂರ್ತಿ ಪ್ರತಿಷ್ಠಾಪಿಸಿ ದಿನನಿತ್ಯ ಪೂಜೆ ಮಾಡುವ ಮೂಲಕ ಅವಳ ನೆನಪಲ್ಲಿ ಸಾಗುವುದಾಗಿ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.
ಹೆಚ್ಚಿನ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://www.facebook.com/108396434841799/posts/162689836079125/
ನಿಮೋನಿಯಾದಿಂದ ಅಗಲಿದ ನೆಚ್ಚಿನ ಪತ್ನಿಗೆ ಮನೆಯಲ್ಲೇ ಮೂರ್ತಿ ಪ್ರತಿಷ್ಠಾಪಿಸಿ ದಾಂಪತ್ಯ ಜೀವನಕ್ಕೆ ಸುಂದರ ಅರ್ಥ ಕಲ್ಪಿಸುವ ಮೂಲಕ ಇಲ್ಲೊಬ್ಬರು ಗಮನ ಸೆಳೆದಿದ್ದಾರೆ. ಬೆಳಗಾವಿಯ ಮರಗಾಯಿ ನಗರದ ನಿವಾಸಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮೈನಾಬಾಯಿ ಚೌಗಲೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ಮನನೊಂದ ಪತಿ ಶಿವಾ ಚೌಗಲೆ ಅವರು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಪತ್ನಿಯ ಮೂರ್ತಿ ತಯಾರಿಸಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಮನೆಯಲ್ಲೇ ಪ್ರತಿಷ್ಠಾಪಿಸಿದ್ದಾರೆ.
ಇದೇ ವರ್ಷ ಮೇ ತಿಂಗಳಲ್ಲಿ ಶಿವಾ ಚೌಗಲೆ ಹಾಗೂ ಮೈನಾಬಾಯಿ ಚೌಗಲೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಶಿವಾ ಚೌಗಲೆಗೆ ಕೋವಿಡ್ ಸೋಂಕು ತಗಲಿದ್ರೆ, ಪತ್ನಿ ಮೈನಾಬಾಯಿಗೆ ನಿಮೋನಿಯಾ ಮತ್ತು ಜ್ವರ ಬಾಧಿಸಿತ್ತು. ಈ ವೇಳೆ ಚಿಕಿತ್ಸೆ ಫಲಿಸದೆ ಮೈನಾಬಾಯಿ ಮೃತಪಟ್ಟಿದ್ದರು. ಜ್ಯೋತಿಷಿಗಳ ಸಲಹೆ ಮೇರೆಗೆ ಶಿವಾ ತನ್ನ ಪತ್ನಿಯ ಮೂರ್ತಿ ನಿರ್ಮಾಣ ಮಾಡಿಸಿ, ಅದ್ಧೂರಿಯಾಗಿ ಮೂರ್ತಿ ಸ್ಥಾಪನೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಮನೆ ಮುಂದೆ ಪೆಂಡಾಲ್ ಹಾಕಿ, ಬಂಧು-ಬಳಗ, ಸ್ನೇಹಿತರನ್ನು ಆಹ್ವಾನಿಸಿದ್ದರು.
ಮನೆಯ ಮೇಲಿನ ಕೋಣೆಯಲ್ಲಿ ಮೈನಾಬಾಯಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಇಡಲು ವಾರ್ಡ್ರೋಬ್ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ದಂಪತಿ ಪಾಲಿಕೆ ಸದಸ್ಯರಾಗಿ ಒಟ್ಟಿಗೆ ಕೆಲಸ ಮಾಡಿದ್ದು, ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ ಮಾಡಿ ಅಭಿವೃದ್ಧಿ ಕಾರ್ಯ ನಡೆಸಲು ಪತಿ ಶಿವಾ ಚೌಗಲೆ ನಿರ್ಧರಿಸಿದ್ದಾರೆ.
ಪತ್ನಿಯ ಅಗಲಿಕೆ ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿತ್ತು. ಇದೇ ಕಾರಣಕ್ಕೆ ಅವಳ ನೆನಪಲ್ಲಿ ಸದಾಕಾಲವೂ ಸಮಯ ಕಳೆಯಬೇಕೆಂದು ಅವಳ ಮೂರ್ತಿ ಪ್ರತಿಷ್ಠಾನ ಮಾಡಿರುವೆ. ಜೊತೆಗೆ ಅವಳ ಹೆಸರಿನಿಂದ ಫೌಂಡೇಶನ್ ತೆರೆದು ಜನರಿಗೆ ಸಹಾಯ ಮಾಡುವ ಬಯಕೆ ಇದೆ.
ಶಿವಾ ಚೌಗಲೆ
ಬೆಳಗಾವಿ