ನಾಲ್ಕು ಸಾವಿರ ಲಂಚ ಪಡೆದಿದ್ದ ಸರ್ಕಾರಿ ವೈದ್ಯ ಅಮಾನತು
ಚಿತ್ರದುರ್ಗ : ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರ ಬಳಿ ನಾಲ್ಕು ಸಾವಿರ ರೂ. ಪಡೆದಿದ್ದ ಆರೋಪದ ಮೇಲೆ ಸರ್ಕಾರಿ ವೈದ್ಯನನ್ನು ಆರೋಗ್ಯ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಕಳೆದ ಜುಲೈ 6 ರಂದು ಶಸ್ತ್ರಚಿಕಿತ್ಸೆಗಾಗಿ ರೋಗಿ ಚಂದ್ರಶೇಖರ ಬಿನ್ ಕೃಷ್ಣಪ್ಪ ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸರ್ಜನ್ ಡಾ. ಸಾಲಿ ಮಂಜಪ್ಪ ಅವರು ರೋಗಿ ಸಂಬಂಧಿಕರ ಬಳಿ ನಾಲ್ಕು ಸಾವಿರ ರೂ. ಪಡೆದಿದ್ದ.
ಈ ಕುರಿತು ರೋಗಿ ಕೃಷ್ಣಪ್ಪ ವೈದ್ಯನಿಗೆ ಹಣ ಕೊಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಸರ್ಕಾರಿ ವೈದ್ಯನ ಮೇಲೆ ಆಕ್ರೋಶವೂ ವ್ಯಕ್ತವಾಗಿತ್ತು. ಸಧ್ಯ ರಾಜ್ಯ ಆರೋಗ್ಯ ಇಲಾಖೆ ವೈದ್ಯನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ವೈದ್ಯನಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.