
ತಗ್ಗಿದ ಮಳೆ, ಮುಂದುವರಿದ ಕೃಷ್ಣಾ ನದಿ ಪ್ರವಾಹ

ಬೆಳಗಾವಿ : ಕಳೆದ ಮೂರು ದಿನಗಳ ಹಿಂದೆ ಇದ್ದ ಮಳೆರಾಯನ ಆರ್ಭಟ ಸಾಕಷ್ಟು ಕಡಿಮೆಯಾಗಿದ್ದರು ಕೃಷ್ಣಾ ನದಿ ಪ್ರವಾಹ ಮಾತ್ರ ಕಡಿಮೆಯಾಗಿಲ್ಲ. ನಿನ್ನೆಯಿಂದ ನದಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆ ಕಂಡಿದ್ದು ಜನರಲ್ಲಿ ಸ್ವಲ್ಪ ಸಮಾಧಾಯ ಆವರಿಸಿದೆ.
ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಉಂಟಾದ ಮಳೆಯಿಂದ ಕೃಷ್ಣಾ ನದಿ ಪ್ರವಾಹ ಉಂಟಾಗಿತ್ತು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ರಾಯಬಾಗದ ಹಲವು ಗ್ರಾಮಗಳು ಜಲಾವೃತಗೊಂಡ ಪರಿಣಾಮ ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು. ಸಧ್ಯ ಮಳೆ ಆರ್ಭಟ ಕಡಿಮೆಯಾಗಿದ್ದು ಪ್ರವಾಹ ಇಳಿಮುಖವಾಗುವ ಸಾಧ್ಯತೆ ಇದೆ.
ಮಂದಿರ, ದರ್ಗಾಗಳಿಗೂ ತಟ್ಟಿದ ಪ್ರವಾಹದ ಬಿಸಿ : ಕೃಷ್ಣಾ ನದಿ ಪ್ರವಾಹಕ್ಕೆ ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ನದಿ ಪಾತ್ರದ ಜನ ಜೀವ ಉಳಿಸಿಕೊಳ್ಳಲು ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗುತ್ತಿದ್ದಾರೆ.
ಭಾನುವಾರ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ ಕಂಡಿದ್ದು ಚಿಕ್ಕೋಡಿ ತಾಲೂಕಿನ ಯಡೂರ ವಿರಭದ್ರೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ನದಿ ನೀರು ದೇಗುಲ ಪ್ರವೇಶ ಆಗುತ್ತಿದ್ದಂತೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದು ಸತ್ತಿ, ಸವದಿ ಸೇರಿದಂತೆ ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡಿವೆ. ಅಥಣಿ ತಾಲೂಕಿನ ಸತ್ತಿ ಗ್ರಾಮದ ಬುರಾನ ಸಾಹೇಬ ದರ್ಗಾ ಜಲಾವೃತಗೊಂಡಿದೆ.
ಗೋಕಾಕ, ಮೂಡಲಗಿ ತಾಲ್ಲೂಕಿನ ಶಾಲೆಗಳಿಗೆ ಜು.29 ಹಾಗೂ 30 ರಂದು ರಜೆ ಘೋಷಣೆ
ಬೆಳಗಾವಿ : ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ ಘೋಷಿಸಲಾಗಿರುತ್ತದೆ.
ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್., ಬಾರವಾಡ, ಕಾರದಗಾ ಗ್ರಾಮಗಳು;
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ, ಹೊಸೂರ ಮತ್ತು ಬಡಕುಂದ್ರಿ ಗ್ರಾಮಗಳು. ಕಾಗವಾಡ ತಾಲ್ಲೂಕಿನ ಜೂಗೂಳ, ಶಾಪುರ, ಮಂಗಾವತಿ, ಕೃಷ್ಣಾ ಕಿತ್ತೂರ, ಕಾತ್ರಾಳ ಮತ್ತು ಬನಜವಾಡ ಗ್ರಾಮಗಳು
ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಜನವಾಡ, ಕಲ್ಲೋಳ ಹಾಗೂ ಅಂಕಲಿ ಗ್ರಾಮಗಳ ಶಾಲೆಗಳಿಗೆ ಮಾತ್ರ ಜುಲೈ 29 ಮತ್ತು ಜುಲೈ 30 ರಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.