ಹಿರಿಯ ಪತ್ರಕರ್ತ ಹಾಗೂ ರೈತಪರ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ ನಿಧನ
ಬೆಳಗಾವಿ : ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ರೈತಪರ ಹೋರಾಟಗಾರರಾದ ಕಲ್ಯಾಣರಾವ್ ಮುಚಳಂಬಿ (72) ಗೋಕಾಕ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಅಕ್ಟೋಬರ್ 3 ರಂದು ಜಿಲ್ಲೆಯ ಗೋಕಾಕ್ ತಾಲೂಕಿನ ಸಾವಳಗಿ ಸಿವಲಿಂಗೇಶ್ವರ ಮಠಕ್ಕೆ ಪಾದಯಾತ್ರೆ ತೆರಳಿದ್ದ ಇವರಿಗೆ, ಮಾರ್ಗಮಧ್ಯೆ ಸುಸ್ತು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ. ರೈತ ಹೋರಾಟಗಾರ ದಿ. ಪ್ರೊ ನಂಜುಂಡಸ್ವಾಮಿ ಅವರ ಒಡನಾಡಿಯಾಗಿದ್ದ ಕಲ್ಯಾಣರಾವ್ 35 ವರ್ಷಗಳ ಹಿಂದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹಸಿರುಕ್ರಾಂತಿ ದಿನಪತ್ರಿಕೆ ಪ್ರಾರಂಭಿಸಿದ್ದರು.
ಗಡಿ ಭಾಗದ ರೈತರ ಸಮಸ್ಯೆಗೆ ಧ್ವನಿಯಾಗಿದ್ದ ಪತ್ರಿಯ ಸಂಪಾದಕರಾಗಿ ಕೆಲಸ ಮಾಡಿದ್ದ ಮುಚಳಂಬಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ಜೊತೆಗೆ ರೈತರ ಆತ್ಮಹತ್ಯೆ ತಡೆಗೆ 150 ಕ್ಕೂ ಹೆಚ್ಚು ಗ್ರಾಮಗಳಿಗೆ ಪಾದಯಾತ್ರೆ ಮಾಡಿದ್ದರು. ಕಲ್ಯಾಣರಾವ್ ಮುಚಳಂಬಿ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು ಗುರುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಬೆಳಗಾವಿ ಸದಾಶಿನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.