
ಟ್ವಿಟರ್ ನಲ್ಲಿ ಟ್ರೆಂಡ್ ಆಯ್ತು ಅದ್ಧೂರಿ ರಾಜ್ಯೋತ್ಸವ ಆಚರಣೆ ಅಭಿಯಾನ : ಸರ್ಕಾರಕ್ಕೆ ಕನ್ನಡಿಗರ ಆಗ್ರಹ

ಬೆಳಗಾವಿ : ನವೆಂಬರ್ 1 ರಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಕನ್ನಡ ಮನಸ್ಸುಗಳು ಮಂಗಳವಾರ ಹಮ್ಮಿಕೊಂಡಿದ್ದ ಟ್ವಿಟರ್ ಅಭಿಯಾನ ಯಶಸ್ಸು ಗಳಿಸಿದ್ದು, ಇಂದಿನ ಟ್ವಿಟರ್ ಟ್ರೆಂಡ್ ನಲ್ಲಿ ಐದನೇ ಸ್ಥಾನ ಪಡೆದಿದೆ.

ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವಕ್ಕೆ ಅನುಮತಿ ನೀಡಬೇಕು. ಕನ್ನಡಿಗರ ಏಕೈಕ ಹಬ್ಬ, ರಾಜ್ಯೋತ್ಸವವನ್ನು ಕೋವಿಡ್ ನೆಪದಲ್ಲಿ ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಆಗ್ರಹಿಸಿ ಯುವಕರು ಮಂಗಳವಾರ ಟ್ವಿಟರ್ ಅಭಿಯಾನ ಹಮ್ಮಿಕೊಂಡಡಿದ್ದರು. ಕಳೆದ ಬಾರಿ ಕೊರೊನಾ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿ ಅನ್ವಯ ಜನರ ಸಹಕಾರದಿಂದ ಸರಳ ರಾಜ್ಯೋತ್ಸವ ಆಚರಣೆ ಮಾಡಿದ್ದು ಈ ಬಾರಿ ಕುಂಟುನೆಪ ಹೇಳಿ ಆಚರಣೆ ಹತ್ತಿಕ್ಕಬಾರದೆಂದು ಆಗ್ರಹಿಸಿ ಟ್ವಿಟರ್ ಅಭಿಯಾನ ಮಾಡಿದ್ದಾರೆ.

ಕನ್ನಡಿಗರು ಆರಂಭಿಸಿದ್ದ ಈ ಅಭಿಯಾನ ಕರ್ನಾಟಕದಲ್ಲಿ ಸತತ ಎರಡು ಗಂಟೆಗಳ ಕಾಲ ಟಾಪ್ 1 ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿತ್ತು. ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಟ್ವೀಟ್ ಗಳು ಬಂದಿದ್ದು, ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಬೆಳಗಾವಿ ಪುಟ, ಬೆಳಗಾವಿ ರಾಯಣ್ಣ, ಬೆಳಗಾವಿ ಮಾರ್ವೆಲಸ್ ಹಾಗೂ ಕನ್ನಡಪರ ಸಂಘಟನೆಗಳು ಈ ಅಭಿಯಾನವನ್ನು ಯಶಸ್ವಿಯಾಗಿ ಮಾಡಿವೆ. ಒಟ್ಟಿನಲ್ಲಿ ಅದ್ಧೂರಿ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂಬುದು ಕನ್ನಡಿಗರ ಆಗ್ರಹವಾಗಿದೆ.
