ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೆಳಗಾವಿ : ರಾಮಾಯಣ ಮಹಾಕಾವ್ಯವವನ್ನು ರಚಿಸಿದವರು ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಅ.20) ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದೆ.
ಪರಿಶಿಷ್ಟ ವರ್ಗಗಳ ಜನರು ಸರಕಾರವು ನೀಡುವ ಎಲ್ಲ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ವಿದ್ಯಾವಂತರಾಗಬೇಕು ಎಂದು ಹೇಳಿದರು.
ಭೂ ಹಿಡುವಳಿ ಯೋಜನೆ ಜಾರಿ : ಸುಮಾರು 6,000 ಕ್ಕೂ ಹೆಚ್ಚು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ. ಅಲ್ಲದೇ, ಅಂತರ್ಜಾತಿ ವಿವಾಹ ಮಾಡಿಕೊಂಡಲ್ಲಿ ಧನ ಸಹಾಯ ಒದಗಿಸಲಾಗುತ್ತಿದೆ. ಸರಕಾರವು ವಿಶೇಷವಾಗಿ ಭೂ ಹಿಡುವಳಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ಭೂಮಿ ರಹಿತ ಪರಿಶಿಷ್ಟ ವರ್ಗಗಳ ಜನರಿಗೆ ಭೂಮಿ ಹಂಚುವ ಕಾರ್ಯ ಮಾಡಲಾಗುತ್ತಿದೆ. ಇದಲ್ಲದೇ ಪರಿಶಿಷ್ಟ ವರ್ಗಗಳ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಿದ ಬಾದಾಮಿಯ ಡಿ.ಬಿ.ಹಡಗಲಿ ಅವರು, ರಾಮಾಯಣ ಎಂಬ ಮಹಾಕಾವ್ಯವನ್ನು ರಚಿಸಿದ್ದು ವಾಲ್ಮೀಕಿಯವರು. ರಾಮಾಯಣ ಮಹಾಕಾವ್ಯವು 7 ಕಾಂಡಗಳು, 500 ಅಧ್ಯಾಯಗಳು ಹಾಗೂ 24,000 ಶ್ಲೋಕಗಳನ್ನು ಒಳಗೊಂಡಿದೆ. ನಿಸರ್ಗದ ಜೊತೆ ಸಂಪರ್ಕ ಹೊಂದಿದ್ದ ಅವರಲ್ಲಿ ಕವಿತ್ವ ಭಾವನೆ ಇತ್ತು. ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ರಾಜನೀತಿ, ಮನೋಧರ್ಮ, ಪ್ರಜಾಪ್ರಭುತ್ವಗಳನ್ನು ರಾಮಾಯಣ ಮಹಾಕಾವ್ಯವು ಪರಿಚಯಿಸಿದೆ ಎಂದು ಹೇಳಿದರು.
ಇದೇ ವೇಳೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಕ್ಕೆ 623 ಅಂಕ ಗಳಿಸಿದ ರಾಯಬಾಗ ತಾಲೂಕಿನ ಚಂದ್ರಪ್ರಭಾ ಶಾಲೆಯ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ನಾಯಕ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಬಡಿಗೇರ ಅವರು ಸ್ವಾಗತಿಸಿದರು. ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ ಅಮಟೆ, ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಪ್ರಕಾಶ ವಡ್ಡರ,
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಉಮಾ ಸಾಲಿಗೌಡರ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹಾಗೂ ವಾಲ್ಮೀಕಿ ಸಮಾಜದ ಮುಖಂಡರಾದ ರಾಜಶೇಖರ ತಳವಾರ ಸೇರಿದಂತೆ ವಾಲ್ಮೀಕಿ ಸಮಾಜದವರು ಉಪಸ್ಥಿತರಿದ್ದರು.
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ: ವೇದಿಕೆ ಸಮಾರಂಭಕ್ಕಿಂತ ಮುಂಚೆ ನಗರದ ಕೋಟೆ ಕೆರೆ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಸದರಾದ ಮಂಗಲಾ ಅಂಗಡಿ ಹಾಗೂ ಶಾಸಕ ಅನಿಲ್ ಬೆನಕೆ ಅವರು ಪೂಜೆ ನೆರವೇರಿಸಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ವಿಕ್ರಮ್ ಆಮಟೆ ಹಾಗೂ ವಾಲ್ಮೀಕಿ ಸಮಾಜದ ಮುಖಂಡರಾದ ರಾಜಶೇಖರ ತಳವಾರ, ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ್ ತಳವಾರ ಕಾಂಗ್ರೆಸ್ ಯುವ ಮುಖಂಡ ಅಮೀತ ರಜಪೂತ ಮುಂತಾದವರು ಉಪಸ್ಥಿತರಿದ್ದರು.