ಸ್ವ ಸಹಾಯ ಸಂಘದ ಹೆಸರಲ್ಲಿ ವಂಚನೆ ; ಮಹಿಳೆಯರೇ ಹುಷಾರ್…….!
ಬೆಳಗಾವಿ : ಬಡತನದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುವ ಹಳ್ಳಿಯ ಮಹಿಳೆಯರಿಗೆ ಸ್ವ ಸಹಾಯ ಸಂಘದ ಹೆಸರಿನಲ್ಲಿ ಸಾಲ ಕೊಡುವುದಾಗಿ ಹೇಳಿ ಸಾವಿರಾರು ಮಹಿಳೆಯರಿಗೆ ಕೋಟ್ಯಾಂತರ ರು. ವಂಚನೆ ಮಾಡಿರುವ ಪ್ರಕರಣ ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹಾಲಭಾವಿ ಗ್ರಾಮದ ಯಲ್ಲವ್ವ ಬನ್ನಿಬಾಗ ಹಾಗೂ ಆಕೆಯ ಪತಿ ಕಮಲೇಶಕುಮಾರ ಬನ್ನಿಬಾಗ ಸೇರಿಕೊಂಡು ರಾಣಿ ಚನ್ನಮ್ಮ ಸ್ವ ಸಹಾಯ ಸಂಘದ ಮೂಲಕ ಹಳ್ಳಿಯ ಅನಕ್ಷರಸ್ಥ ಮಹಿಳೆಯರನ್ನು ಸಾಲ ನೀಡುವುದಾಗಿ ನಂಬಿಸಿದ್ದಾರೆ. ಅವರ ಹೆಸರಿನಲ್ಲಿ ತಲಾ ಒಂದು ಲಕ್ಷದವರೆಗೆ ಸಾಲವನ್ನು ಬ್ಯಾಂಕಿನಿಂದ ಪಡೆದು ಪಾಪಸ್ ಕಟ್ಟದೆ ಮಹಿಳೆಯರ ತಲೆಗೆ ಕಟ್ಟುವ ಕೆಲಸ ಆರೋಪಿ ಯಲ್ಲವ್ವ ಮಾಡಿರುವ ವಂಚನೆ ಬೆಳಕಿಗೆ ಬಂದಿದೆ.
ತಮ್ಮ ಹೆಸರಿನಲ್ಲಿ ಸಾಲ ಪಡೆದು ವಂಚನೆಗೆ ಒಳಗಾಗಿದ್ದದು ಅರಿತ ಮಹಿಳೆಯರು ಸೋಮವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಲಭಾವಿ ಗ್ರಾಮದ ಯಲ್ಲವ್ವ ಬನ್ನಿಬಾಗ ಮನೆಗೆ ಮುತ್ತಿಗೆ ಹಾಕಿದ್ದಾರೆ. ತಮ್ಮ ಹೆಸರಿನಲ್ಲಿ ಪಡೆದ ಸಾಲ ತೀರಿಸಬೇಕು ಎಂದು ಪಟ್ಟು ಹಿಡಿದ ಮಹಿಳೆಯರು ಕ್ಷಣಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಬಂದು ಗುಂಪು ಚದುರಿಸಲು ಹರಸಾಹಸ ಪಡುವಂತಾಯಿತು.
ಪ್ರಕರಣ ಕುರಿತು ಮಾಹಿತಿ ನೀಡಿದ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್. ಸ್ವ ಸಹಾಯ ಸಂಘದ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ತನಿಖೆ ನಡೆಸಿ ಮೋಸ ಹೋದವರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದರು.