Select Page

Advertisement

ಕಲ್ಯಾಣರಾವ ಮುಚಳಂಬಿ ಸಾಮಾನ್ಯ ವ್ಯಕ್ತಿ ಅಲ್ಲ ಸಾಂಸ್ಕೃತಿಕ ಶಕ್ತಿ – ಡಾ.ಸಿದ್ದರಾಮ ಮಹಾಸ್ವಾಮಿಗಳು

ಕಲ್ಯಾಣರಾವ ಮುಚಳಂಬಿ ಸಾಮಾನ್ಯ ವ್ಯಕ್ತಿ ಅಲ್ಲ ಸಾಂಸ್ಕೃತಿಕ ಶಕ್ತಿ – ಡಾ.ಸಿದ್ದರಾಮ ಮಹಾಸ್ವಾಮಿಗಳು

ಬೆಳಗಾವಿ: ಉತ್ತರ ಕರ್ನಾಟಕದ ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಬೆಳಗಾವಿಯ ನೆಹರು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು. ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಸ್ನೇಹಸೇತು ಕಥಾ ಸಂಕಲನ ಬಿಡುಗಡೆ ಹಾಗೂ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ನೆರವೇರಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ – ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರೆ, ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಶಶಿಕಾಂತ ನಾಯಕ ವಹಿಸಿದ್ದರೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಆಗಮಿಸಿದ್ದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಗದಗ ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ‘ ನಾವು ಅನೇಕ ಪುಣ್ಯಸ್ಮರಣೆ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತೇವೆ. ಇಂದಿನ ಕಾರ್ಯಕ್ರಮ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡುವವರಿಗೆ ಮಾದರಿ ಕಾರ್ಯಕ್ರಮ ಆಗಿತ್ತು. ಕೇವಲ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಅವರ ಬಗ್ಗೆ ಮಾತನಾಡಲು ಸೀಮಿತಗೊಳಿಸಲಿಲ್ಲ. ಸ್ನೇಹಸೇತು ಕೃತಿ ಲೋಕಾರ್ಪಣೆ, ಕಥಾ ಸ್ಪರ್ಧೆ ಏರ್ಪಡಿಸಿರೋದು, ಕಲ್ಯಾಣರಾವ ಮುಚಳಂಬಿ ಸ್ಮರಣೆಯಲ್ಲಿ ಕಲ್ಯಾಣಶ್ರೀ ಪ್ರಶಸ್ತಿ ನೀಡಿದ್ದು, ಕಥೆಗಾರರ ಗೌರವಿಸಿದ್ದು ಅತ್ಯಂತ ಮಹತ್ವದ ಕಾರ್ಯಕ್ರಮ ಇದಾಗಿತ್ತು ಎಂದು ಅಭಿಪ್ರಾಯ ಪಟ್ಟರು.

ಸ್ನೇಹಸೇತು ಕಥಾಸಂಕಲನದ ಮುನ್ನುಡಿಯಲ್ಲಿ ಎಲ್ಲಾ ಕಥೆಗಳ ಸಾರದ ಮುನ್ನುಡಿ ಬರೆದಿದ್ದಾರೆ. ಕಲ್ಯಾಣರಾವ ಮುಚಳಂಬಿ ಕಲ್ಯಾಣ ಕರ್ನಾಟಕದಿಂದ ಕಿತ್ತೂರು ಕರ್ನಾಟಕಕ್ಕೆ ಬಂದರು. ಅವರು ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಸೇತು ಆಗಿದ್ದರು. ಅನೇಕ ಹೃದಯ ಸ್ನೇಹ ಬೆಸೆಯುವ ಕಾರ್ಯಕ್ರಮಗಳನ್ನು ಕಲ್ಯಾಣರಾವ ಮುಚಳಂಬಿ ಮಾಡಿಕೊಂಡು ಬಂದರು. ತಮ್ಮ ಬಳಿ ಸಮಯ ಇತ್ತಂದ್ರೆ ಅಲ್ಲಿ ಹೋಗಿ ಬರೋಣ ಆ ಕೆಲಸ ಮಾಡೋಣ ಅನ್ನೋರು. ಹಸಿರು ಕ್ರಾಂತಿ ಕನ್ನಡ ದಿನಪತ್ರಿಕೆ, ರೈತ ಹೋರಾಟ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಿದ್ದರು.

ಬೆಳಗಾವಿಯ ಹಸಿರು ಕ್ರಾಂತಿ ಪತ್ರಿಕಾಲಯ ಆಡಿಟೋರಿಯಂ ರೀತಿ ಆಗಿತ್ತು. ಈ ಕಚೇರಿಯಲ್ಲಿ ಅನೇಕ ವರ್ಷಗಳ ಕಾಲ ನಾಡ ಹಬ್ಬ ಕಾರ್ಯಕ್ರಮ ನಡೆಸಿದ್ದರು. ಕಲ್ಯಾಣರಾವ ಸಾಮಾನ್ಯ ವ್ಯಕ್ತಿ ಅಲ್ಲ ಸಾಂಸ್ಕೃತಿಕ ವ್ಯಕ್ತಿ ಆಗಿ ನಮಗೆ ಕಾಣುತ್ತಿದ್ದರು. ಕಲ್ಯಾಣ ಕರ್ನಾಟಕದಿಂದ ಕಿತ್ತೂರು ಕರ್ನಾಟಕಕ್ಕೆ ಬಂದು ಹಸಿರು ಕ್ರಾಂತಿ ಪತ್ರಿಕೆ ಹೊರ ತಂದರು. ನನ್ನ ಪತ್ರಿಕೆ ಮೂಲಕ ರೈತ ಚಿಂತನೆ, ರೈತರ ಹಿತಕ್ಕಾಗಿ, ಸರ್ಕಾರ ಗಮನ ಸೆಳೆಯಬೇಕು ಎಂದು ಪ್ರತ್ಯಕ್ಷವಾಗಿ ಹೇಳುತ್ತಿದ್ದರು. ಅವರು ಬಹುಮುಖ ವ್ಯಕ್ತಿತ್ವ ಹೋರಾಟಗಾರರು. ಕಲ್ಯಾಣರಾವ ಮುಚಳಂಬಿರನ್ನು ಬೆಳಗಾವಿ ಜನ ಎಂದೆಂದೂ ಮರೆಯಲ್ಲ.

ಸಾಹಿತಿಗಳಾದ ಸ.ರಾ.ಸುಳಕೊಡೆ, ಜಲತ್ಕುಮಾರ ಪುಣಜಗೌಡ ಕಲ್ಯಾಣರಾವ ಮುಚಳಂಬಿರವರ ರೈಟ್ ಹ್ಯಾಂಡ್ ಲೆಫ್ಟ್ ಹ್ಯಾಂಡ್ ರೀತಿ ಇದ್ದವರು. ಇಬ್ಬರ ಸಂಪಾದಕತ್ವದಲ್ಲಿ ಸ್ನೇಹಸೇತು ಕಥಾಸಂಕಲನ ಬಹಳ ಮಹತ್ವ ಪೂರ್ಣವಾಗಿ ಬಂದಿವೆ. ಕಾದಂಬರಿಯಲ್ಲಿ ಇರುವ ವಿಷಯ ವಸ್ತುಗಳು ಕಥೆಗಳಲ್ಲಿ ಬಂದಿದೆ. ಇದು ಅಪೂರ್ವವಾದ ಕಥಾ ಸಂಕಲನ, ಆದರ್ಶಪ್ರಾಯ ಕಾರ್ಯಕ್ರಮ.ತಾವು ಬೆಳೆಯುವ ಜೊತೆ ಮತ್ತೊಬ್ಬರನ್ನೂ ಬೆಳೆಸುವ ಕೆಲಸ ಮಾಡಿದ್ದಾರೆ. ಅನೇಕ ವ್ಯಕ್ತಿಗಳಿಗೆ ಅನ್ನದ ದಾರಿ ಮಾಡಿಕೊಟ್ಟಿದ್ದು ಇವರನ್ನು ನಿಜಕ್ಕೂ ಸ್ಮರಿಸಿ ಕೊಳ್ಳಬೇಕು. ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆ ಹಸಿರು ಕ್ರಾಂತಿ ಕಾರ್ಯಾಲಯ ಮೂಲಕ ನಡೆಯುತ್ತಿದ್ದವು. ಕಲ್ಯಾಣರಾವ ಮುಚಳಂಬಿ ಗೆ ನೀಡಿದ ಸಹಾಯ ಸಹಕಾರ ಅವರ ಮಕ್ಕಳಿಗೆ ನೀಡಬೇಕು’ ಎಂದು ತಿಳಿಸಿದರು.

ಕಲ್ಯಾಣರಾವ ಮುಚಳಂಬಿ ಅವರು ಹೆಸರಿಗೆ ತಕ್ಕಂತೆ ‘ಕಲ್ಯಾಣ’ ಗುಣದವರು – ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ಚಾಮೀಜಿ

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಷ ಬ್ರ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ಚಾಮೀಜಿ ಮಾತನಾಡಿ, ಕಲ್ಯಾಣರಾವ ಮುಚಳಂಬಿ ಅವರು ಹೆಸರಿತೆ ತಕ್ಕಂತೆ ‘ಕಲ್ಯಾಣ’ ಗುಣದವರು. ಯಾರೊಂದಿಗೂ, ಯಾವುದೇ ವಿಷಯಕ್ಕೂ, ಎಂದೂ ರಾಜೀ ಮಾಡಿಕೊಳ್ಳದ ಅವರ ನಾಯಕತ್ವ ಗುಣವೇ ಎಲ್ಲರಿಗೂ ಬೇಕಾಗುತ್ತದೆ. ಅಪಾರ ಸಂಖ್ಯೆಯ ಪತ್ರಕರ್ತರನ್ನು, ಅಪಾರ ಸಂಖ್ಯೆಯ ರೈತ ಹೋರಾಟಗಾರರು ಹುಟ್ಟು ಹಾಕಿದರು. ಅವರಿಗೆ ಬದುಕು ಕಟ್ಟಿಕೊಟ್ಟವರು.ಹೊಳೆಗೆ ವಿಮುಖವಾಗಿ ಈಜುವುದು ಬಹಳ ಕಷ್ಟ. ಮುಚಳಂಬಿ ಅವರು ಜೀವನಪೂರ್ತಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಈಜಿದರು. ರೈತರಿಗಾಗಿಯೇ ಒಂದು ಪತ್ರಿಕೆ ತೆರೆದರು, ರೈತರಿಗಾಗಿಯೇ ಒಂದು ಪಕ್ಷ ಕಟ್ಟಿದರು, ರೈತರಿಗಾಗಿಯೇ ಅವರು ಜೀವ ಬಿಟ್ಟರು. ಇಂದು ಅವರ ಶಿಷ್ಯರ ಮಾತುಗಳನ್ನು ಕೇಳುತ್ತಿದ್ದರೆ ‘ಮಾತು ಕೆಲಸವಾಗಬಾರದು, ಕೆಲಸವೇ ಮಾತುಗಳಾಗಬೇಕು’ ಎಂಬ ನಾಣ್ಣುಡಿಗೆ ಕನ್ನಡಿ ಹಿಡಿದಂತಿವೆ’ ಎಂದರು.

‘ಸರ್ಕಾರಗಳೇ ರೈತರ ಮಾರಾಟಕ್ಕೆ ಮುಂದಾಗಿವೆ. ಇಂಥ ದಿನಗಳಲ್ಲಿ ರೈತ ಚಳವಳಿ ಮತ್ತೆ ಕಸುವು ಪಡೆಯಬೇಕಿದೆ. ಕಲ್ಯಾಣರಾವ ಮುಚಳಂಬಿ ಅವರ ಆದರ್ಶಗಳನ್ನು ಮುಂದಿಟ್ಟುಕೊAಡು ಹೋರಾಟಗಳು ನಡೆಯಬೇಕಿದೆ’ ಎಂದು ರೈತ ಚಳವಳಿಯ ನಾಯಕ, ವಿಧಾನ ಪರಿಷತ್‌ನ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ ಆಶಯ ವ್ಯಕ್ತಪಡಿಸಿದರು. ‘ರೈತ ಚಳವಳಿಗೆ ಪ್ರೊ.ನಂಜುಂಡ‍ಸ್ವಾಮಿ ಅವರ ಕಾಲದಲ್ಲಿದ್ದ ದೊಡ್ಡ ಶಕ್ತಿ ಈಗ ಉಳಿದಿಲ್ಲ. ಬಂಡವಾಳ ಶಾಹಿಗಳಿಗೆ ದೇಶವನ್ನು ಒಪ್ಪಿಸಿಬಿಡಲಾಗಿದೆ. ಹೀಗೇ ಮುಂದುವರಿದರೆ ಮುಂದೊಂದು ದಿನ ರೈತರಿಗೆ ಉಳಿಗಾಲವಿಲ್ಲ. ಇಂಥ ಸಂದರ್ಭದಲ್ಲಿ ಕಲ್ಯಾಣರಾವ ಮುಚಳಂಬಿ ಅವರಂಥ ಧೀಮಂತ, ನಿಸ್ವಾರ್ಥದ ನಾಯಕರ ಗೈರು ಕಾಡುತ್ತದೆ. ಅವರ ಆದರ್ಶಗಳ ನೆರಳಲ್ಲಿ ಹೋರಾಟ ಮುಂದುವರಿಸಿದರೆ ಮಾತ್ರ ನಾವು ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗುತ್ತದೆ’ ಎಂದು ಹೇಳಿದರು.

ಇನ್ನೋರ್ವ ರೈತ ನಾಯಕ ಕೆ.ಟಿ. ಗಂಗಾಧರ ಮಾತನಾಡಿ, ‘ಪತ್ರಿಕೋದ್ಯಮ ಹಾಗೂ ಚಳವಳಿ ಎರಡೂ ಮಾರ್ಗಗಳಲ್ಲಿ ಕಲ್ಯಾಣರಾವ ಅವರು ಮುಂಚೂಣಿಯಲ್ಲಿ ಇದ್ದವರು. ರೈತರಿಗೆ ಅನ್ಯಾಯವಾದಾಗ ಸರ್ಕಾರವನ್ನು ಎಚ್ಚರಿಸಿದವರು’ ಎಂದರು.

‘ರೈತ ಚಳವಳಿ ಕೇವಲ ರೈತರಿಗೆ ಮಾತ್ರ ಬೇಕಾಗಿದೆ ಎಂಬ ತಪ್ಪು ಕಲ್ಪನೆ ದೇಶದಲ್ಲಿದೆ. ಆದರೆ, ಯಾರು ಯಾರು ಅನ್ನ ತಿನ್ನುತ್ತಾರೋ ಎಲ್ಲರಿಗೂ ಇದು ಸಂಬAದಿಸಿದ್ದು. ರೈತರ ಕೈಯಲ್ಲಿ ಭೂಮಿ ಇದ್ದರೆ ಮಾತ್ರ ಅವರು ಬೆಳೆ ಬೆಳೆಯುತ್ತಾರೆ. ಕೃಷಿಯಿಂದ ಮಾತ್ರ ಸಾಮಾಜಿಕ, ಐದ್ಯೋಗಿಕ ಹಾಗೂ ಆರ್ಥಿಕ ವಲಯಗಳು ಬದುಕುಲು ಸಾಧ್ಯ. ಇಂಥ ದೊಡ್ಡ ಸಂಗತಿಗಳನ್ನು ಮುಂದಿಟ್ಟುಕೊAಡೇ ಮುಚಳಂಬಿ ಅವರು ಪ್ರಬಲವಾಗಿ ವಿಷಯ ಮಂಡಿಸುತ್ತಿದ್ದರು’ ಎಂದು ಹೋರಾಟದ ದಿನಗಳನ್ನು ಸ್ಮರಿಸಿದರು.

ಕೃತಿ ಪರಿಚಯ ಮಾಡಿ ಮಾತನಾಡಿದ ರಾಣಿ ಚನ್ನಮ್ಮ ವಿ.ವಿ ಪ್ರಾಧ್ಯಾಪಕಿ, ಸಾಹಿತಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು, ‘ಸ್ನೇಹ ಸೇತು’ ಕಥಾಸಂಕಲನಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೇ ಸಾಹಿತಿಗಳು ಬರೆದಿದ್ದಾರೆ. ಅದರಲ್ಲೂ ಜಾಗತೀಕರಣದ ಹೊಡೆತಗಳಿಗೆ ನಮ್ಮ ತಾಯ್ತನ, ಹೆಣ್ತನಗಳು ಕೂಡ ಹೇಗೆ ನಲುಗುತ್ತಿವೆ ಎಂಬುದರ ಮೇಲೆ ಕೆಲವರು ಬೆಳಕು ಚೆಲ್ಲಿದ್ದಾರೆ. ನಮ್ಮ ನೆಲದ ಹೆಣ್ಣುಮಕ್ಕಳು ಋತುಮತಿಯಾಗುವ ವಯಸ್ಸು ಏರುಪೇರಾಗಿದೆ. ಫಲವತ್ತತೆಯ ವಯಸ್ಸು ಇಳಿದು ಹೋಗಿದೆ. ಇದೆಲ್ಲ ಜಾಗತೀಕರಣಕ್ಕೆ ಸಿಲಕಿದ ನಮ್ಮ ಜೀವನ ಪದ್ಧತಿಯ ಫಲಶ್ರುತಿ. ಇಂಥ ಸೂಕ್ಷ್ಮ ವಿಷಯಗಳನ್ನೂ ಕಥಾಹಂದರಲ್ಲಿ ಕಾಣಬಹುದು’ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಾಂತ ಲಕ್ಕಪ್ಪ ನಾಯಕ ಮಾತನಾಡಿ, ಕಲ್ಯಾಣರಾವ ಹಾಗೂ ತಮ್ಮ ಒಡನಾಟದ ಹೋರಾಟದ ದಿನಗಳನ್ನು ನೆನೆದರು.

ಕಲ್ಯಾಣರಾವ ಮುಚಳಂಬಿರವರ ಕುರಿತು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ರೈತ ಹೋರಾಟಗಾರ ಮಲ್ಲಿಕಾರ್ಜುನ ವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ, ಪತ್ರಕರ್ತರಾದ ಮುರುಗೇಶ್ ನಿರಾಣಿ, ಈಶ್ವರ ಹೂಟಿ, ಕೆ.ಎನ್.ದೊಡ್ಡಮನಿ, ಚಿತ್ರ ನಟ ಸಿ.ಕೆ.ಮೆಕ್ಕೆದ ಸಂಸ್ಮರಣೆ ನುಡಿಗಳನ್ನಾಡಿದರು.

ಶಿವಾಪುರದ ಕಾಡಸಿದ್ಧೇಶ್ವರ ಸ್ವಾಮೀಜಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್, ರೈತ ಮುಖಂಡ ಕೆ.ಟಿ.ಗಂಗಾಧರ, ಸಾಹಿತಿಗಳಾದ ಮೈತ್ರಾಯಿಣಿ ಗದಿಗೆಪ್ಪಗೌಡರ, ಸಾಹಿತಿ ಲೀಲಾ ಕುಲಕೋಟಿ, ಪತ್ರಕರ್ತ ರಾಜೇಂದ್ರ ಪಾಟೀಲ್, ದಿ.ಕಲ್ಯಾಣರಾವ ಮುಚಳಂಬಿ ಧರ್ಮಪತ್ನಿ ಶ್ರೀಮತಿ ನಿರ್ಮಲಾ ಕ. ಮುಳಚಂಬಿ ಸೇರಿ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಐವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ, ರೈತ ಮುಖಂಡ ಕೆ.ಟಿ.ಗಂಗಾಧರ, ಸಾವಯವ ಕೃಷಿಕ ಅಶೋಕ ತುಬಚಿ, ಹಿರಿಯ ಪತ್ರಕರ್ತರಾದ ವಿಜಯಕುಮಾರ್ ಪಾಟೀಲ್, ಮಹಾವೀರ ಮೆಕ್ಕಳಕಿರವರಿಗೆ ಕಲ್ಯಾಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿವಂಗತ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿಯವರ ‘ಅವಳು ತಾಯಿ’ ಕಥೆಗೆ ಪ್ರಥಮ ಬಹುಮಾನ, ಶ್ರೀಮತಿ ಸುನಂದಾ ಹಾಲಭಾವಿಯವರ ‘ಉಡುಗೊರೆ’ ಕಥೆಗೆ ದ್ವಿತೀಯ ಬಹುಮಾನ, ಡಾ.ಪ್ರಕಾಶ್ ಕಾಡೆರವರ ‘ಅಕ್ಕರೆ ತಾಯವ್ವ’ ಕಥೆಗೆ ತೃತೀಯ ಬಹುಮಾನ ನೀಡಲಾಯಿತು. ಮೆಚ್ಚುಗೆ ಪಡೆದ ಐದು ಕಥೆಗಳು ಸೇರಿ ಹತ್ತು ಕಥೆಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಮುಚಳಂಬಿ ಕುಟುಂಬಸ್ಥರು ಹಾಗೂ ಜನಕಲ್ಯಾಣ ಪ್ರತಿಷ್ಠಾನ ಸದಸ್ಯರು ದಿವಂಗತ ಕಲ್ಯಾಣರಾವ ಮುಚಳಂಬಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಜನಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ಜಲತ್ಕುಮಾರ್ ಪುಣಜಗೌಡ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಆಶಾ ಯಮಕನಮರಡಿ ಸಂಗೀತ ಸೇವೆ ಒದಗಿಸಿದರೆ, ರಾಜೇಶ್ವರಿ ಹಿರೇಮಠ ನಿರೂಪಿಸಿದರು.

Advertisement

Leave a reply

Your email address will not be published. Required fields are marked *