ಯತ್ನಾಳ್ ವಿರುದ್ಧ ಕ್ರಮಕ್ಕೆ ಮುಂದಾಗುವುದಾ ಬಿಜೆಪಿ ಹೈಕಮಾಂಡ್..?
ಚಿಕ್ಕೋಡಿ : ಪದೇ ಪದೇ ಸರ್ಕಾರದ ವಿರುದ್ಧ ಆರೋಪ ಮಾಡುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮತ್ತೊಮ್ಮೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹರಿಹಾಯ್ದಿದ್ದು, ಯತ್ನಾಳ್ ಬಿಜೆಪಿ ಕೋರ್ ಕಮೀಟಿ ಸದಸ್ಯ ಅಲ್ಲ ಹಾಗೆ ರಾಜ್ಯ ನಾಯಕನೂ ಅಲ್ಲ ಎಂದು ಪುನಃ ಉಚ್ಚರಿಸಿದ್ದಾರೆ.
ಸೋಮವಾರ ಪಟ್ಟಣದಲ್ಲಿ ಯತ್ನಾಳ್ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಇವರು. ಯತ್ನಾಳ್ ಹೇಳಿಕೆ ಕೇವಕ ಅವರ ವೈಯಕ್ತಿಕ. ಅವರು ರಾಜ್ಯ ನಾಯಕರಲ್ಲ. ಮುಂದಿನ ದಿನಮಾನದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತಾಗಿ ಅರುಣ್ ಸಿಂಗ್ ಸುಳಿವು ನೀಡಿದ್ದಾರೆ. ಇನ್ನೂ ಸರ್ಕಾರದ ವಿರುದ್ಧ ಪಂಚಮಸಾಲಿ ಸಮುದಾಯದ ಹೋರಾಟದ ವಿಚಾರವಾಗಿ ಮಾತನಾಡಿ. ಈಗಾಗಲೇ ಸಮುದಾಯದ ನಾಲ್ಕು ಜನ ಸಚಿವರನ್ನಾಗಿ ಮಾಡಲಾಗಿದೆ. ಜೊತೆಗೆ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಖುಷಿಯಿಂದ ಇದ್ದಾರೆ ಎಂದರು.
ಯತ್ನಾಳ್ ಹೇಳಿಕೆಯಿಂದ ವರಿಷ್ಠರಿಗೆ ಮುಜುಗರ : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುವ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಪಕ್ಷದ ಹೈಕಮಾಂಡ್ ಮುಜುಗರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವು ಮುಖಂಡರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ ಎಂಬುದು ಪಕ್ಷದ ವಲಯದಿಂದ ಕೇಳಿಬರುತ್ತದೆ. ಜೊತೆಗೆ ಯತ್ನಾಳ್ ಹೇಳಿಕೆ ಕುರಿತು ಉಂಟಾಗುತ್ತಿರುವ ಗೊಂದಲಕ್ಕೆ ಬ್ರೆಕ್ ಹಾಕಲು ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳುವ ಲಕ್ಷಣ ಸಧ್ಯ ಗೋಚರಿಸುತ್ತಿದೆ.
ಬೆಳಗಾವಿಯಲ್ಲಿ ಅರುಣ್ ಸಿಂಗ್ ಗುಪ್ತ ಸಭೆ : ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಉಂಟಾದ ಬಿರುಕು ಸರಿಪಡಿಸಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾನುವಾರ ತಡರಾತ್ರಿ ವರೆಗೆ ಪಕ್ಷದ ಹಿರಿಯ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷಣ ಸವದಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ್ದು ಮುಂಬರುವ ಚುನಾವಣೆ ರಣತಂತ್ರ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.