
ಬಿಜೆಪಿ ಚಕ್ರ ವ್ಯೂಹದಲ್ಲಿ ಸಿಲುಕಿದ ಸಿಎಂ ಸಿದ್ದು ; ಹೊರ ಬರುವುದು ಕಷ್ಟ….?

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಡೆದುಕೊಂಡ ಸೈಟ್ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಈ ವಿಷಯ ತೀವ್ರ ಸಂಚಲನ ಮೂಡಿಸಿದೆ. ಈ ಹಿಂದೆ ಯಡಿಯೂರಪ್ಪ ವಿಷಯದಲ್ಲಿ ಕಾಂಗ್ರೆಸ್ ನಡೆದುಕೊಂಡ ಮಾದರಿಯಲ್ಲಿ ಇಂದು ಸಿಎಂ ವಿರುದ್ಧ ಬಿಜೆಪಿ ಹೈಕಮಾಂಡ್ ಚಕ್ರವ್ಯೂಹ ರಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರು ಹೊರಬಿದ್ದಿದೆ. ಲೇಔಟ್ ಅಭಿವೃದ್ಧಿ ಪಡಿಸಲು ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಜಮೀನಿಗೆ ಬದಲಾಗಿ ಉನ್ನತ ಮಟ್ಟದ ವಸತಿ ಬಡಾವಣೆಯಲ್ಲಿ 14 ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಧ್ಯ ಈ ಪ್ರಕರಣ ರಾಜಕೀಯ ತಿರುವು ಒಡೆದುಕೊಂಡಿದ್ದು
ಮುಡಾ ಪ್ರಕರಣದ ಮಾಹಿತಿ ದಾಖಲೆ ಸಹಿತ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ನೋಟೀಸ್ ಕಳಿಸಿದ್ದಾರೆ. ಟಿ.ಜೆ ಅಬ್ರಹಾಂ ಎಂಬ ಸಾಮಾಜಿಕ ಕಾರ್ಯಕರ್ತರು ಈ ಕುರಿತು ಖಾಸಗಿ ದೂರು ಸಲ್ಲಿಸಿದ್ದರು.
ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿಯಲ್ಲಿ ಕೇಳಲಾಗಿತ್ತು. ಮೂರು ದಿನಗಳ ಹಿಂದೆ ದೂರುದಾರ ಟಿ.ಜೆ ಅಬ್ರಹಾಂ ಅವರನ್ನು ಕರೆದು ರಾಜ್ಯಪಾಲರು ಮಾಹಿತಿ ಪಡೆದಿದ್ದರು. ಬಿಜೆಪಿ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿಯಾಗಿ, ಸಿಎಂ ವಿರುದ್ಧ ತನಿಖೆ ಜರುಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ಒಂದು ಕಡೆ ರಾಜ್ಯ ಬಿಜೆಪಿ ನಾಯಕರು ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇತ್ತ ರಾಜ್ಯಪಾಲರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಸಧ್ಯ ಸಿಎಂ ವಿರುದ್ಧ ಕೇಳಿಬಂದ ಆರೋಪದ ಕುರಿತು ರಾಜ್ಯಪಾಲರು ತನಿಖೆಗೆ ಆದೇಶ ನೀಡಿದರೆ ಸಿಎಂ ರಾಜೀನಾಮೆ ನೀಡುವ ಪರಿಸ್ಥಿತಿ ಬರಬಹುದು.
ಈ ಹಿಂದೆ ಯಡಿಯೂರಪ್ಪ ವಿರುದ್ಧ ಕೇಳಿಬಂದಿದ್ದ ಡಿನೊಟಿಪಿಕೇಷನ್ ಹಗರಣದಲ್ಲಿ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್ ನಡೆದುಕೊಂಡ ರೀತಿ ಈಗಲೂ ಬಿಜೆಪಿಯವರನ್ನು ನಿದ್ದೆಗೆಡಿಸುತ್ತದೆ. ಕಾರಣ ಕೇಳಿ ನೋಟಿಸ್ ನೀಡದೆ ತನಿಖೆಗೆ ಆದೇಶ ನೀಡುವ ಮೂಲಕ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ರಾಜಕೀಯ ಆಟ ಆಡಿತ್ತು ಎಂಬುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಸಧ್ಯ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪದ ವಿಚಾರದಲ್ಲಿ ಬಿಜೆಪಿ ಕೂಡಾ ಅಸಲಿ ಆಟ ಆಡಲು ಮುಂದಾಗಿದೆ. ಇದರಿಂದ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ಎದುರಾಗುವ ಸಾಧ್ಯತೆ ಕೂಡಾ ದಟ್ಟವಾಗಿದೆ. ಸಧ್ಯ ರಾಜ್ಯಪಾಲರ ಆದೇಶದ ಮೇಲೆ ಎಲ್ಲವೂ ಅವಲಂಬಿತವಾಗಿದೆ.