ಗ್ರಾಮಗಳನ್ನು ಸುತ್ತುವರಿಯುತ್ತಿರುವ ಕೃಷ್ಣಾ ನದಿ ನೀರು ; ಆತಂಕದಲ್ಲಿ ಜನರು
ಬೆಳಗಾವಿ : ನಿರಂತರ ಮಳೆಯಿಂದ ಕಂಗಾಲಾಗಿರುವ ಜನರಿಗೆ ಈಗ ಪ್ರವಾಹದ ಸಂಕಷ್ಟ ಎದುರಾಗಿದೆ. ಕೃಷ್ಣಾ ನದಿ ನೀರಿನ ಮಟ್ಟ ಕ್ಷಣ, ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಅನೇಗ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಅಥಣಿ, ಕುಡಚಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು ಜನ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಬಣದ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು ಜನ ಮುಂಜಾಗ್ರತರಾಗಿ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಇನ್ನೂ ಖವಟಕೊಪ್ಪ, ಹುಲಗಬಾಳಿ, ಶೇಗುಣಸಿ ಸೇರಿದಂತೆ ನದಿ ಪಾತ್ರದ ಹಳ್ಳಿಗಳಲ್ಲಿ ನೀರು ಸುತ್ತುವರಿಯುತ್ತಿದೆ.
ಈಗಾಗಲೇ ಕುಡಚಿ ಜಲಾಶಯ ಸಂಪೂರ್ಣ ಮುಳುಗಡೆ ಆಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿವೆ. ಇನ್ನೂ ಅಥಣಿ ಗೋಕಾಕ್ ಸಂಪರ್ಕ ಸೇತುವೆ ಸಧ್ಯಕ್ಕೆ ಸಂಚಾರ ಮುಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ನಿಯೋಜನೆ ಮಾಡಿದರೆ ಒಳ್ಳೆಯದು ಎಂಬುದು ಜನರ ಅಭಿಪ್ರಾಯ.