Select Page

ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಭರ್ಜರಿ ತಯಾರಿ

ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಭರ್ಜರಿ ತಯಾರಿ

ಬೆಳಗಾವಿ : ಡಿಸೆಂಬರ್ 19 ರಿಂದ ಹತ್ತು ದಿನಗಳವರೆಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ಆಡಳಿತ ಯಂತ್ರ ಕುಂದಾನಗರಿಗೆ ಆಗಮಿಸಲಿದ್ದು, ಈ ಹಿನ್ನಲೆ ಜಿಲ್ಲಾಡಳಿತ ವತಿಯಿಂದ ಭರದ ಸಿದ್ಧತೆ ನಡೆದಿದೆ‌.

ಬೆಳಗಾವಿಗೆ ಆಗಮಿಸಲಿರುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಆತಿಥ್ಯ ನೀಡಲು ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲರಿಗೂ ತಂಗಲು ಸಮರ್ಪಕ ಹೋಟೆಲ್ ವ್ಯವಸ್ಥೆ ಸೇರಿದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆಯುವ 10 ದಿನಗಳ ವರೆಗೂ ಚಳಿಗಾಲದ ಅಧಿವೇಶನದ ಬಂದೋಬಸ್ತಗಾಗಿ  ಸುಮಾರು 4931 ಪೊಲೀಸ್ ಸಿಬ್ಬಂದಿಗಳನ್ನು ‌ನಿಯೋಜಿಸಲಾಗಿದೆ.

86 ಹೋಟೆಲ್ ಬುಕ್ : ಸಚಿವರು, ಶಾಸಕರು ಅಧಿಕಾರಿಗಳು ಸೇರಿದಂತೆ ಆಗಮಿಸುವ ಎಲ್ಲರಿಗೂ ವಸತಿ ವ್ಯವಸ್ಥೆಗಾಗಿ ಬೆಳಗಾವಿ ನಗರದ 86 ಹೋಟೆಲುಗಳ 2200 ರೂಂಗಳನ್ನು ಬುಕ್ ಮಾಡಲಾಗಿದೆ. ಮುಖ್ಯಮಂತ್ರಿಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಗೆಸ್ಟ್ ಹೌ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಸ್ಟಾರ್ ಹೋಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. 650 ಕ್ಕೂ ಅಧಿಕ ಸಂಖ್ಯೆಯ ಮಾರ್ಷಲ್ ಮತ್ತು ಡ್ರೈವರ್ ಗಳಿಗೆ ಹಾಸ್ಟೆಲ್ ಗಳಲ್ಲಿ ಉಳಿಯಲಿದ್ದಾರೆ.

ವಸತಿ ಕೇಂದ್ರದಿಂದ ಅಧಿಕಾರಿಗಳ ಓಡಾಟಕ್ಕಾಗಿ ಜಿಲ್ಲೆಯ ವಾಹನಗಳನ್ನು ಹೊರತುಪಡಿಸಿ ಹೊರ ಜಿಲ್ಲೆಗಳಿಂದಲೂ 300 ಕ್ಕೂ ಅಧಿಕ ಸರಕಾರಿ ವಾಹನಗಳನ್ನು ಬೆಳಗಾವಿಗೆ ಕರೆಯಿಸಿಕೊಳ್ಳಲಾಗುತ್ತಿದೆ. 220 ಕ್ಕೂ ಅಧಿಕ ಜೀಪು , ಕಾರು ಮತ್ತು 80 ಕ್ಕೂ ಅಧಿಕ ಇನ್ನೋವಾ ಕಾರುಗಳು ಬರಲಿವೆ.

5000 ಪೊಲೀಸ್ ಸಿಬ್ಬಂದಿ ನಿಯೋಜನೆ : ಚಳಿಗಾಲದ ಅಧಿವೇಶನದಲ್ಲಿ ಸುಸಜ್ಜಿತವಾಗಿ ನಡೆಯುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ  ಆರು ಜನ ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿಎಸ್ ಪಿ, 95 ಸಿಪಿಐ, 241 ಪಿಎಸ್ ಐ, 298 ಎಎಸ್ಐ, 2829 ಹೆಡ್ ಕಾನ್ ಸ್ಟೇಬಲ್, 800 ಕೆಎಸ್ ಆರ್ ಪಿ ತುಕಡಿ, 170 ಕ್ಯೂಆರ್ ಟಿ, 35 ಗರುಡಾ ತಂಡ, 130 ಎಎಸ್ ಸಿ ತಂಡ, 100 ವಾಯರ್ ಲೈಸ್ ಸಿಬ್ಬಂದಿ, 100 ಹೋಮ್ ಗಾಡ್೯ ಸೇರಿದಂತೆ ಸುಮಾರು 5000 ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹೊರ ಜಿಲ್ಲೆಯಿಂದ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸುಸಜ್ಜಿತವಾದ ವಸತಿ ವ್ಯವಸ್ಥೆ, ಊಟೋಪಹಾರದ ಸಕಲ ಸಿದ್ಧತೆಯನ್ನು ನಗರ ಪೊಲೀಸ್ ಇಲಾಖೆ ಮಾಡಿಕೊಂಡಿದೆ.
ಅಲ್ಲದೆ, ಅಗ್ನಿ ಶಾಮಕ‌ ದಳ 12, ಅಂಬ್ಯೂಲೆನ್ಸ್ 16, ಗರುಡಾ ಪಡೆ 1, ಕೆಎಸ್ ಆರ್ ಟಿಸಿ ಬಸ್ 60, ಚೆಕ್ ಪೊಸ್ಟ್ 26 ನಿರ್ಮಿಸಲಾಗಿದೆ. ಇಷ್ಟೆ ಅಲ್ಲ ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಸುವರ್ಣ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಹೊರಡಿಸಲಾಗಿದೆ.

**********

ಪ್ರತಿಭಟನೆಗೆ ಸ್ಥಳ ನಿಗದಿ : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರತಿಭಟನಾಕಾರರು ಬೆಳಗಾವಿಗೆ ಆಗಮಿಸುತ್ತಾರೆ. ಪ್ರತಿ ವರ್ಷವೂ ನೂರಕ್ಕೂ ಅಧಿಕ ಪ್ರತಿಭಟನೆಗಳು ನಡೆಯುತ್ತುದ್ದ ಸುವರ್ಣ ಗಾರ್ಡನ್ ಸ್ಥಳದ ಬದಲಿ ಈ ಬಾರಿ ಬೇರೆ ಸ್ಥಳ ನೀಡಲಾಗಿದೆ. ಭದ್ರತೆ ದೃಷ್ಟಿಯಿಂದ ಈ ಬಾರಿ ಬೆಳಗಾವಿ ನಗರಕ್ಕೆ ಹೊಂದಿಕೊಂಡ ಬಸ್ತವಾಡ ಗ್ರಾಮದಲ್ಲಿ ಪ್ರತಿಭಟನೆಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಯಲಿವೆ.‌

Advertisement

Leave a reply

Your email address will not be published. Required fields are marked *

error: Content is protected !!