
Breaking : ಹಿಡಕಲ್ ನ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ; ಮುಂದುವರಿದ ದಾಖಲೆಗಳ ಪರಿಶೀಲನೆ

ಬೆಳಗಾವಿ : ನೀರಾವರಿ ಯೋಜನೆಗಳು ಹಾಗೂ ಮತ್ತಿತರ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡುವುದು, ಪರಿಹಾರದಲ್ಲಿ ತಾರತಮ್ಯ ಎಸಗುವುದು ಹಾಗೂ ಪರಿಹಾರ ಮಂಜೂರು ಮಾಡಲು ಕಮಿಷನ್ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿಡಕಲ್ ಡ್ಯಾಂ ನಲ್ಲಿರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಾರ್ಯಾಲಯದ ಮೇಲೆ ಇಂದು ಮಧ್ನಾಹ್ನ ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ)ದ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಗದಗ ಜಿಲ್ಲೆಯ ಸುಮಾರು ೩೫ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಖಲೆಗಳ ಪರಿಶೀಲನೆ ನಾಳೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಎಸಿಬಿ ಬೆಳಗಾವಿ ಎಸ್ಪಿ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಎ.ಎಸ್.ಗುದಿಗೊಪ್ಪ, ಸುನಿಲಕುಮಾರ, ಪರಮೇಶ್ವರ ಕವಟಗಿ, ಆರ್.ಎಫ್.ದೇಸಾಯಿ ಹಾಗೂ ಸಮೀರ್ ಮುಲ್ಲಾ ದಾಳಿ ನಡೆಸಿದ್ದಾರೆ.