ಫೆಬ್ರವರಿ 28 ಕ್ಕೆ ಬೆಳಗಾವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮನ
ಬೆಳಗಾವಿ : ಫೆ.28 ರಂದು ಬೆಳಿಗ್ಗೆ 10 ಕ್ಕೆ, ಐದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದ್ದು ಕೇಂದ್ರ ರಸ್ತೆ,ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ಕೊಡಲಿದ್ದಾರೆ ಎಂದು ಸಂಸದೆ ಮಂಗಲ ಅಂಗಡಿ ಮಾಹಿತಿ ನೀಡಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಸದೆ ಮಂಗಲ ಅಂಗಡಿ, ಪೆ. 28ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 3972ಕೋಟಿ ವೆಚ್ಚದಲ್ಲಿ 238ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಆರು ಪಥಗಳ ಕಾಮಗಾರಿಗಳಿಗೆ ಚಾಲನೆ ಸಿಗಲಿದ್ದು ಆ ಪೈಕಿ ಬೆಳಗಾವಿ-ಸಂಕೇಶ್ವರ 40ಕಿ.ಮೀ. ಬೈಪಾಸ್ ರಸ್ತೆ, ಸಂಕೇಶ್ವರದಿಂದ ಮಹಾರಾಷ್ಟ್ರ ಗಡಿಯವರೆಗೆ 37.83 ಕಿ.ಮೀ.ವರೆಗೆ ಬೈಪಾಸ್ ರಸ್ತೆ ಹೀಗೆ 3014 ಕೋಟಿ ವೆಚ್ಚದಲ್ಲಿ ಒಟ್ಟು 147ಕಿ.ಮೀ. ಕಾಮಗಾರಿ ಇದಾಗಿದೆ.
ಅದೇ ರೀತಿ 246.77 ಕೋಟಿ ವೆಚ್ಚದಲ್ಲಿ 69ಕಿ.ಮೀ. ಸಂಕ್ಲೀನ್-ಜಾಂಬೋಟಿ ಬೆಳಗಾವಿ ಎರಡು ಪಥದ ರಸ್ತೆ ಕಾಮಗಾರಿ ಹಾಗೂ ಪಿಬ್ಲೂಡಿ ಇಲಾಖೆಯಿಂದ 246.78 ಕೋಟಿ ವೆಚ್ಚದಲ್ಲಿ 80ಕಿ.ಮೀ ವಿಜಯಪುರ-ಮುರಗುಂಡಿ ರಸ್ತೆ ಹಾಗೂ 90.30ಕೋಟಿ ವೆಚ್ಚದಲ್ಲಿ 11.62ಕಿ.ಮೀ. ಸಿದ್ದಾಪುರ-ವಿಜಯಪುರ ರಸ್ತೆ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದರು.
ಇನ್ನು ಕೇಂದ್ರ ಸಚಿವರ ನಿತಿನ್ ಗಡ್ಕರಿ ಅವರ ಜೊತೆಗೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸೇರಿ ಹಲವು ಮಂತ್ರಿಗಳು ಆಗಮಿಸಲಿದ್ದಾರೆ ಎಂದು ಸಂಸದೆ ಮಂಗಲ್ ಅಂಗಡಿ ಹೇಳಿದರು.