
ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಯೋಗಿ ; ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ

ಬೆಳಗಾವಿ : ಪ್ರಯಾಗರಾಜ್ ನಲ್ಲಿ ಜರುಗಿದ್ದ ಐತಿಹಾಸಿಕ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರ ಕುಟುಂಬಕ್ಕೆ ಯೋಗಿ ಸರ್ಕಾರ ತಲಾ 25 ಲಕ್ಷದಂತೆ ಒಂದು ಕೋಟಿ ರು. ಪರಿಹಾರ ನೀಡಿದೆ.
ಜನವರಿ 29 ರ ಮೌನಿ ಅಮವಾಸ್ಯೆ ಪವಿತ್ರ ಸ್ನಾನ ಮಾಡುವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಬೆಳಗಾವಿಯ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಟ, ಶೆಟ್ಟಿ ಗಲ್ಲಿ ನಿವಾಸಿ ಅರುಣ್ ಕೋರ್ಪಡೆ ಹಾಗೂ ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತಪಟ್ಟಿದ್ದರು. ಮೃತ ಕುಟುಂಬಕ್ಕೆ ಪ್ರಯಾಗರಾಜ್ ಜಿಲ್ಲಾಡಳಿತದಿಂದ ತಲಾ 25 ಲಕ್ಷ ರು. ಪರಿಹಾರ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್. ಪ್ರಯಾಗರಾಜ್ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮಂದರ್ ಅವರ ಜೊತೆ ಬೆಳಗಾವಿ ಜಿಲ್ಲಾಡಳಿತ ನಿರಂತರ ಸಂಪರ್ಕ ನಡೆಸಿತ್ತು. ಕುಂಭಮೇಳದಲ್ಲಿ ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರಿಗೆ ಅಲ್ಲಿನ ಜಿಲ್ಲಾಡಳಿತ ತಲಾ 25 ಲಕ್ಷ ರು. ಪರಿಹಾರ ನೀಡಿದೆ ಎಂದರು.