
ಕೃಷ್ಣಾ ನದಿ ಪ್ರವಾಹಕ್ಕೆ ಟ್ರ್ಯಾಕ್ಟರ್ ಪಲ್ಟಿ ; ಜನರ ರಕ್ಷಣೆಗೆ ಹರಸಾಹಸ

ಚಿಕ್ಕೋಡಿ:ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಕಿವಾಟ್-ಬಸ್ತವಾಡ್ ರಸ್ತೆಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್‌ನಲ್ಲಿದ್ದ ಸುಮಾರು ಎಂಟು ಜನರು ಕೃಷ್ಣಾ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಆಘಾತಕಾರಿ ಘಟನೆ ಇಂದು ಶುಕ್ರವಾರ ಬೆಳಗ್ಗೆ ನಡೆದಿದೆ.
ಈ ಕುರಿತು ಮಾಹಿತಿ ತಿಳಿದ ನಂತರ ಎರಡೂ ಗ್ರಾಮಗಳ ಗ್ರಾಮಸ್ಥರು ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ದೋಣಿ ಮೂಲಕ ನಾಪತ್ತೆಯಾದ ನಾಗರಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಕಿವಾಟ , ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಮೋಟಾರ್ ಸ್ಟಾರ್ಟ್ ಮಾಡಲು ಅಕಿವಾಟ್ – ಬಸ್ತವಾಡ್ ರಸ್ತೆಯಿಂದ ಟ್ರ್ಯಾಕ್ಟರ್ ಹೋಗುತ್ತಿತ್ತು. ಈ ವೇಳೆ ಸುಮಾರು 8 ಮಂದಿ ಪ್ರಯಾಣಿಕರಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಸದ್ಯ ಕೃಷ್ಣಾ ನದಿಯಲ್ಲಿ ಉಂಟಾದ ಪ್ರವಾಹದ ನೀರಿನ ಹರಿವಿಗೆ ಎಲ್ಲರೂ ಕೊಚ್ಚಿ ಹೋಗಿದ್ದಾರೆ.
ಈ ಘಟನೆಯ ಬಗ್ಗೆ ತಿಳಿದ ತಕ್ಷಣ ತಾಲೂಕ ಆಡಳಿತ ಯಾಂತ್ರಿಕ ದೋಣಿ ಮೂಲಕ ವಿಪತ್ತು ನಿರ್ವಹಣಾ ಸಿಬ್ಬಂದಿಯ ಸಹಾಯದಿಂದ ಜನರಿಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಇವರಲ್ಲಿ ಆರು ಮಂದಿಯನ್ನು ಪತ್ತೆ ಹಚ್ಚಿ ಜೀವ ಉಳಿಸಲು ಸಾಧ್ಯವಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಇದರಲ್ಲಿ ಅಕಿವಾಟ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಇಕ್ಬಾಲ್ ಬೈರಾಗದಾರ ಸಹ ನಾಪತ್ತೆಯಾಗಿದ್ದಾರೆ.