
ಹೆಸ್ಕಾಂ ನಿರ್ಲಕ್ಷ್ಯ ; 200 ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿ

ಕಾಗವಾಡ: ಪಟ್ಟಣದ ಶಿರಗುಪ್ಪಿ ರಸ್ತೆ ಪಕ್ಕದ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿದ ಪರಿಣಾಮ 200 ಎಕರೆ ಕಬ್ಬುಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರು. ಹಾನಿಯಾಗಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಹೊತ್ತಿಕೊಂಡ ಬೆಂಕಿ ಮಧ್ಯಾಹ್ನ ವರೆಗೂ ನಿಯಂತ್ರಣಕ್ಕೆ ಬಾರದಿರುವದರಿಂದ ಬೆಂಕಿ ನಂದಿಸಲು ರೈತರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು. ರಾಯಬಾಗ ಮತ್ತು ಉಗಾರ ಶುಗರ್ಸನ ಎರಡು ಅಗ್ನಿಶಾಮಕ ವಾಹನ ಹಾಗೂ ಮಹಾರಾಷ್ಟ್ರದ ದತ್ತ ಶುಗರ್ಸ್ ಕಾರ್ಖಾನೆ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು.
ಈ ವೇಳೇ ರೈತ ಮುಖಂಡ ಮಹಾದೇವ ಉದಗಾಂವೆ ಮಾತನಾಡಿ, ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ್ದು, ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಇದರಿಂದ ರೈತನಿಗೆ ನಷ್ಟ ಉಂಟಾಗುತ್ತಿದ್ದರು ಅಧಿಕಾರಿಗಳು ಮಾತ್ರ ಕೈ ಕಟ್ಟಿ ಕುಳಿತಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಕಬ್ಬಿನ ಗದ್ದೆಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಸಡಿಲಾಗಿ ಶಾರ್ಟ ಸರ್ಕಿಟ್ ಆಗದಂತೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಕೇಂದ್ರಕ್ಕೆ ಇದ್ದ ಅಗ್ನಿಶಾಮಕ ವಾಹನ ಸರಿಯಾಗಿ ನಿರ್ವಹಣೆ ಇಲ್ಲದೆ ಇರುವದರಿಂದ ಬೇರೆ ತಾಲೂಕಿನಿಂದ ಕರೆಸಿಕೊಳ್ಳಬೇಕಾಗಿದೆ. ಕೂಡಲೇ ನಮ್ಮ ತಾಲೂಕಿನ ಅಗ್ನಿಶಾಮಕ ಠಾಣೆ ಸ್ಥಾಪಿಸಿಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಹಶಿಲ್ದಾರ ರಾಜೇಶ ಬುರ್ಲಿ, ಪಿಎಸ್‌ಐ ಜಿ.ಜಿ. ಬಿರಾದರ ಭೇಟಿ ನೀಡಿ ಪರಿಶೀಲನೆ ನಡೆಸಿದರು.