Select Page

ಶಿಗ್ಗಾಂವಿ ಗೆಲ್ಲಿಸಿದ್ದು ಯಾರು…? ಕಾಂಗ್ರೆಸ್ ನಲ್ಲಿ ಜೋರಾದ ಕ್ರೆಡಿಟ್ ಪೊಲಿಟಿಕ್ಸ್

ಶಿಗ್ಗಾಂವಿ ಗೆಲ್ಲಿಸಿದ್ದು ಯಾರು…? ಕಾಂಗ್ರೆಸ್ ನಲ್ಲಿ ಜೋರಾದ ಕ್ರೆಡಿಟ್ ಪೊಲಿಟಿಕ್ಸ್

ಬೆಳಗಾವಿ : ಉಪ ಚುನಾವಣೆಯಲ್ಲಿ ರಾಜ್ಯದ ಮೂರು ಕ್ಷೇತ್ರ ಗೆದ್ದು ಕಾಂಗ್ರೆಸ್ ಕಮಾಲ್ ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ಎಷ್ಟೇ ಪ್ರಯತ್ನ ಪಟ್ಟರು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ ಈಗ ಕಾಂಗ್ರೆಸ್ ಗೆಲುವಿನ ಹಿಂದೆ ಯಾರ ಕೈ ಮೇಲು ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರು ಅಷ್ಟೊಂದು ಚರ್ಚೆ ಆಗುತ್ತಿಲ್ಲ. ಆದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಗನನ್ನು ಸೋಲಿಸಿದ ಶಿಗ್ಗಾಂವಿ ಕ್ಷೇತ್ರದ ಗೆಲುವಿನಲ್ಲಿ ನಮ್ಮದೇ ಪಾತ್ರ ಎಂದು ಆಯಾ ನಾಯಕರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬಡಿದಾಡುಕೊಳ್ಳುತ್ತಿದ್ದಾರೆ. ಹಾಗಾದರೆ ಶಿಗ್ಗಾಂವಿ ಗೆಲುವಿನ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ನಲ್ಲೇ ಪೈಪೋಟಿ ಜೋರಾಯ್ತಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ.

ಸಾಮಾನ್ಯವಾಗಿ ಈ ಬಾರಿ ಶಿಗ್ಗಾಂವಿಯಲ್ಲಿ ಹರಿದು, ಹಂಚಿ ಹೋಗುತ್ತಿದ್ದ ಮುಸ್ಲಿಂ ಮತಗಳು ಒಂದು ಪಕ್ಷದ ಪರವಾಗಿ ನಿಂತಿವೆ. ಇನ್ನೂ ಅಹಿಂದ ಮತಗಳು ಕಾಂಗ್ರೆಸ್ ಬೆನ್ನಿಗೆ ನಿಂತಿದ್ದು ಈ ಬಾರಿ ಸ್ಪಷ್ಟವಾಗಿ ಕಾಣಸಿಗುತ್ತವೆ. ಕಳೆದ ನಾಲ್ಕು ಚುನಾವಣೆಯಲ್ಲಿ ನಿರಂತರವಾಗಿ ಗೆದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಮತಗಳನ್ನು ಪಡೆಯುತ್ತಿದ್ದರು. ಇತ್ತ, ಮುಸ್ಲಿಂ ಹಾಗೂ ಹಿಂದುಳಿದ ಸಮುದಾಯದ ಮತಗಳು ಬೊಮ್ಮಾಯಿಗೆ ಅನಾಯಾಸವಾಗಿ ಬರುತ್ತಿದ್ದವು.

ಹಾಗೆ ನೋಡಿದರೆ ಬಸವರಾಜ ನೊಮ್ಮಾಯಿ ಬಿಜೆಪಿ ನಾಯಕರಾದರೂ ಜನತಾ ಪರಿವಾರದ ಮನಸ್ಥಿತಿ ಈಗಲೂ ಹೊಂದಿದವರು. ಜಾತಿಗಳನ್ನು ಮೀರಿ ಎಲ್ಲಾ ಸಮುದಾಯಗಳ ಮನಸ್ಸು ಗೆದ್ದ ಪರಿಣಾಮ ಅವರು ನಿರಂತರ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಅವರ ಮಗನಿಗೆ ಎಲ್ಲಾ ಸಮುದಾಯದ ಮತ ಪಡೆಯಲು ಸಾಧ್ಯವಾಗಿಲ್ಲ.

ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿ, ಮುಸ್ಲಿಂ, ಹಾಗೂ ಹಿಂದುಳಿದ ವರ್ಗದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಬಾರಿ ಪಂಚಮಸಾಲಿ ಮತಗಳು ಕಾಂಗ್ರೆಸ್ ಪರ ವಾಲಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಭಾಷಣ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ. ಸಚಿವ ಶಿವಾನಂದ ಪಾಟೀಲ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಲಕ್ಷ್ಮಣ ಸವದಿ ಲಿಂಗಾಯತ ಮತಗಳ ಕ್ರೋಡೀಕರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ‌ ಎಂಬ ಮಾತು ಇದೆ.

ಇತ್ತ ಕುರುಬ ಸಮುದಾಯದ ಮತ ಸೇರಿದಂತೆ ಹಿಂದುಳಿದ ವರ್ಗದ ಮತ ಸಿಎಂ ಮುಖ ನೋಡಿ ಕಾಂಗ್ರೆಸ್ ಗೆ ಬಿದ್ದಿದ್ದು ಅನುಮಾನ ಇಲ್ಲ. ಇನ್ನೂ ಮುಸ್ಲಿಂ ಮತಗಳು ಒಂದು ಪಕ್ಷದ ಪರವಾಗಿ ವಾಲಲು ಯಾವುದೇ ಕಾರಣದ ಅವಶ್ಯಕತೆ ಇಲ್ಲ. ಹಿಂದುಳಿದ ವರ್ಗದ ಮತಗಳು ಸಚಿವ ಸತೀಶ್ ಜಾತಕಿಹೊಳಿ ಅವರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಗೆ ಸೇರಿದ್ದರ ಪರಿಣಾಮ ಶಿಗ್ಗಾಂವಿ ಅಭೂತಪೂರ್ವ ಗೆಲುವು ಸಾಧಿಸಲು ಕೈ ಪಡೆಗೆ ಸಾಧ್ಯವಾಗಿದೆ.

ಸಂಘಟಿತ ಹೋರಾಟದ ಫಲವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರು ಇತ್ತ ಗೆಲುವಿನ ಕ್ರೆಡಿಟ್ ಪಡೆಯಲು ನಾಯಕರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಆಯಾ ನಾಯಕರ ಅಭಿಮಾನಿಗಳು ಗೆಲುವನ್ನು ತಮಗೆ ಬೇಕಾದಂತೆ ವಿಮರ್ಶೆ ಮಾಡುತ್ತಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪರ ಸಾಮಾಜಿಕ ಜಾಲತಾಣದಲ್ಲಿ ಶಿಗ್ಗಾಂವಿ ಗೆಲುವಿನ ಪಾಲು ಅವರಿಗೆ ಎಂಬಂತೆ ಬಿಂಬಿಸುವ ಪೋಸ್ಟರ್ ಹಾಕಲಾಗುತ್ತಿದೆ.

ಇನ್ನೂ ಮತ್ತೊಂದುಕಡೆ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಮಾತನ್ನು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಆ ರೀತಿಯ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.

ಇನ್ನೂ ಸಚಿವ ಶಿವಾನಂದ ಪಾಟೀಲ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೂ ಶಿಗ್ಗಾಂವಿ ಉಸ್ತುವಾರಿ ವಹಿಸಿಕೊಂಡು ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಅವರ ಅಭಿಮಾನಿಗಳು ಗೆಲುವಿನ ಶ್ರೇಯವನ್ನು ತಮ್ಮ ನಾಯಕರಿಗೆ ಅರ್ಪಿಸುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಶಿಗ್ಗಾಂವಿ ಗೆಲುವಿನ ಕ್ರೆಡಿಟ್ ಪೊಲಿಟಿಕ್ಸ್ ಜೋರಾಗಿ ನಡೆಯುತ್ತಿರುವುದು ಸುಳ್ಳಲ್ಲ.

Advertisement

Leave a reply

Your email address will not be published. Required fields are marked *

error: Content is protected !!