
ಹೈಕಮಾಂಡ್ ಎಚ್ಚರಿಕೆಗೆ ಮೆತ್ತಗಾದರಾ ಯತ್ನಾಳ್? ಕದನ ವಿರಾಮ ಘೋಷಣೆ!

ವಿಜಯಪುರ : ಪದೇ ಪದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಸದ್ಯ ಮೆತ್ತಗಾದಂತೆ ಕಾಣುತ್ತದೆ. ಬಿಜೆಪಿ ಕೇಂದ್ರ ಹೈಕಮಾಂಡ್ ಕೊಟ್ಟ ಒಂದು ಡೋಸ್ ನಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಹೌದು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬಿಜೆಪಿ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಮಾತಮಾಡುತ್ತಿದ್ದ ಯತ್ನಾಳೆ ಅನೇಕ ಸಂದರ್ಭಗಳಲ್ಲಿ ಸ್ವಪಕ್ಷೀಯರಿಗೆ ಮುಜುಗರ ಆಗುವಂತ ಹೇಳಿಕೆ ನೀಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಬಿಜೆಪಿ ಶಿಸ್ತು ಸಮೀತಿ ಎಚ್ಚರಿಕೆ ನೀಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಕೊಣೆಗೆ ಕೇಂದ್ರ ಹೈಕಮಾಂಡ್ ಬುಲಾವ್ ನೀಡಿದ್ದಲ್ಲದೆ ಮುಂಬರುವ ದಿನಗಳಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಸಧ್ಯ ಯತ್ನಾಳ್ ಅವರ ಮಾತಿನ ವರಸೆ ಬದಲಾಗಿದೆ.

ಗುರುವಾರ ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ಮುಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತು ಯಾವುದೇ ಪ್ರಶ್ನೆ ಕೇಳಬೇಡಿ. ಅವರ ಕುರಿತು ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಅವರು ಪಕ್ಷದ ಹಿರಿಯರಾಗಿದ್ದು ಅವರ ಕುರಿತು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಯತ್ನಾಳ್ ಈ ನಡೆಯಿಂದ ಸದ್ಯ ರಾಜ್ಯ ಬಿಜೆಪಿಯ ಕೆಲ ನಾಯಕರಲ್ಲಿ ಸಮಾಧಾನ ಮನೆಮಾಡಿದ್ದು ಸುಳ್ಳಲ್ಲ. ಕೊನೆಗೂ ಹೈಕಮಾಂಡ್ ತಗೆದುಕೊಂಡ ನಿರ್ಧಾರದಿಂದ ಯತ್ನಾಳ್ ಬಾಯಿ ಮುಚ್ಚಿ ಮಸುವ ಕೆಲಸ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಯತ್ನಾಳ್ ಅವರ ಪದೇ ಪದೇ ಆರೋಪಕ್ಕೆ ಗುರಿಯಾಗಿಗುತ್ತಿದ್ದ ಸಚಿವ ನಿರಾಣಿಗೂ ಇದು ಸಮಾಧಾನ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.

ಉಚ್ಚಾಟಿಸುವ ಎಚ್ಚರಿಕೆ ನೀಡಿದೆಯಾ ಹೈಕಮಾಂಡ್ : ಯತ್ನಾಳ್ ಹೇಳಿಕೆಯಿಂದ ರಾಜ್ಯ ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ಭಾರಿ ಹೊಡೆತ ನೀಡುವ ಸಾಧ್ಯತೆ ಇತ್ತು. ಜೊತೆಗೆ ಹಿರಿಯ ಮುಖಂಡ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆಯಿಂದ ಅನೇಕ ನಾಯಕರಲ್ಲಿ ಇರುಸು ಮುರುಸು ಉಂಟುಮಾಡಿತ್ತು. ಈ ಎಲ್ಲಾ ಕಾರಣಗಳಿಂದ ಬೇಸತ್ತಿದ್ದ ಬಿಜೆಪಿ ಹೈಕಮಾಂಡ್ ಯತ್ನಾಳ್ ಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ ಎಂದು ಹೇಳಲಾಗುತ್ತಿದೆ.