
ಡಿ. ರೂಪಾ ವಿರುದ್ಧ ದೂರು ; ಐಪಿಎಸ್ ವರ್ತಿಕಾ ಕಟಿಯಾರ್ ವರ್ಗಾವಣೆ

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ ರೂಪಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿದೆ.
ಸೆಪ್ಟೆಂಬರ್ 6, 2024 ರಂದು ರೂಪಾ ಅವರ ಆದೇಶದ ಮೇರೆಗೆ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಗೃಹರಕ್ಷಕ ದಳದ ಮಲ್ಲಿಕಾರ್ಜುನ್ ಅನುಮತಿಯಿಲ್ಲದೆ ನನ್ನ ಕೊಠಡಿಗೆ ಪ್ರವೇಶಿಸಿದ್ದು, ದಾಖಲೆಗಳನ್ನು ಕಳವು ಮಾಡಿದ್ದಾರೆ.
ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀಲಿಯನ್ನು ತೆಗೆದುಕೊಂಡು ಕೊಠಡಿಯನ್ನು ತೆರೆದರೆ, ಮಂಜುನಾಥ್ ಫೈಲ್‌ಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ವಾಟ್ಸಾಪ್ ಮೂಲಕ ಐಜಿಪಿಗೆ ಕಳುಹಿಸಿದ್ದಾರೆ ಎಂದು ವರ್ತಿಕಾ ಆರೋಪಿಸಿದ್ದರು.
2010 ರ ಬ್ಯಾಚ್‌ನ ಐಪಿಎಸ್, ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ರೂಪಾ ಅವರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ವರ್ತಿಕಾ ಅವರನ್ನು ಗೃಹ ರಕ್ಷಕ ದಳದ ಡಿಐಜಿ ಮತ್ತು ಹೆಚ್ಚುವರಿ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದಾಗ್ಯೂ, ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶದಲ್ಲಿ ವರ್ಗಾವಣೆಗೆ ಯಾವುದೇ ಕಾರಣವನ್ನು ನೀಡಿಲ್ಲ.