
ವಿಜಯೇಂದ್ರ ಚಕ್ರವ್ಯೂಹಕ್ಕೆ ಸಿಲುಕಿದರಾ ಯತ್ನಾಳ್, ಜಾರಕಿಹೊಳಿ

ಬೆಂಗಳೂರು : ದಿನಗಳೆದಂತೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವರ್ಚಸ್ಸು ಹೆಚ್ಚುತ್ತಿದೆ. ಇನ್ನೊಂದೆಡೆ ಮುಡಾ ಹಗರಣದಲ್ಲಿ ಕಾಂಗ್ರೆಸ್ ಕಟ್ಟಿಹಾಕಲು ಮೈಸೂರು ಪಾದಯಾತ್ರೆಗೆ ಸಿದ್ಧತೆ ನಡೆದಿದೆ. ಈ ಮಧ್ಯೆ ವಿಜಯೇಂದ್ರ ವಿರೋಧಿ ಪಾಳೆಯದಲ್ಲಿ ಚಟುವಟಿಕೆಗಳು ಜೋರಾಗಿವೆ.
ಹೌದು ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳಿರುವುದು ಗೊತ್ತಿರುವ ವಿಷಯ. ಆದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಚಕ್ರವ್ಯೂಹಕ್ಕೆ ಅನೇಕ ನಾಯಕರು ಕಂಗಾಲಾಗಿರುವುದು ಸ್ಪಷ್ಟವಾಗಿದೆ. ಮುಡಾ ಹಗರಣ ವಿರೋಧಿಸಿ ಬಿಜೆಪಿ ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದೆ. ಮೊದಲಿಗೆ ಕುಮಾರಸ್ವಾಮಿ ಅಪಸ್ವರ ಎತ್ತಿದರೂ ನಂತರ ಒಪ್ಪಿಗೆ ಸೂಚಿಸಿದ್ದಾರೆ.
ಹಾಗಾದರೆ ವಿಜಯೇಂದ್ರ ನಿನ್ನೆಯಷ್ಟೇ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿ ನಂತರ ಬಿಜೆಪಿ ಒಳಗೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಇತ್ತ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದ ಮೈತ್ರಿಕೂಟದ ನಾಯಕ ಕುಮಾರಸ್ವಾಮಿ ವರಸೆ ಬದಲಿಸಿದ್ದಾರೆ. ಕೆಲ ಗೊಂದಲಗಳನ್ನು ಸರಿ ಮಾಡಿಕೊಂಡಿದ್ದೇವೆ ಎಂಬ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ ವಿಜಯೇಂದ್ರ ವಿರುದ್ಧ ನಿರಂತರ ಧ್ವನಿ ಎತ್ತಿರುವ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರ ಆಟ ನಡೆಯದಂತೆ ಪಕ್ಕಾ ಪ್ಲ್ಯಾನ್ ಒಂದನ್ನೂ ಮಾಡಿರುವ ಇವರು ಇಬ್ಬರೂ ನಾಯಕರನ್ನು ಪಕ್ಷದ ಸಭೆಗಳಿಗೆ ಆಹ್ವಾನಿಸುವ ಕೆಲಸ ಮಾಡುತ್ತಿಲ್ಲ. ಬಹಿರಂಗವಾಗಿ ತಮ್ಮ ವಿರುದ್ಧ ಎಷ್ಟೇ ಹೇಳಿಕೆ ಕೊಟ್ಟರೂ ವಾಪಸ್ ವಿಜಯೇಂದ್ರ ಮಾತನಾಡದೆ ಮೌನದಿಂದಲೇ ಉತ್ತರ ನೀಡುತ್ತಿದ್ದಾರೆ.
ಇತ್ತ ಬಿಜೆಪಿ ಪ್ರಮುಖ ನಾಯಕರು ಪಾದಯಾತ್ರೆ ಕುರಿತು ಸಭೆ ನಡೆಸಿ ರೂಪುರೇಷೆ ಸಿದ್ದಪಡಿಸಿಕೊಂಡರೆ ಅತ್ತ ಬಿಜೆಪಿ ಕೆಲ ಅತೃಪ್ತ ನಾಯಕರು ಸಭೆ ನಡೆಸಿದ್ದಾರೆ. ಪ್ರಮುಖವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಮೂವರು ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುವ ಮೂಲಕ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.