Select Page

ಪ್ರವಾಹ ಪೀಡಿತ ಜನರನ್ನು ಮರೆತ ಸಂಸದ ಜೊಲ್ಲೆ

ಪ್ರವಾಹ ಪೀಡಿತ ಜನರನ್ನು ಮರೆತ ಸಂಸದ ಜೊಲ್ಲೆ

ಚಿಕ್ಕೋಡಿ : ಕಳೆದ ಎರಡು ವರ್ಷಗಳಿಂದ ಸತತವಾಗಿ ಪ್ರವಾಹಕ್ಕೆ ಒಳಗಾಗುತ್ತಿರುವ ಚಿಕ್ಕೋಡಿ ಉಪ ವಿಭಾಗದ ಐದಾರು ತಾಲೂಕುಗಳು ಅಕ್ಷರಶಃ ನಲುಗಿ ಹೋಗಿವೆ. ಈ ಬಾರಿಯೂ ಭೀಕರ ಪ್ರವಾಹಕ್ಕೆ ಒಳಗಾಗಿರುವ ಕೃಷ್ಣಾ ನದಿ ಪಾತ್ರದ ಜನರ ನೋವು ಕೇಳಲು ಸಂಸದರೇ ಇಲ್ಲವಾಗಿದ್ದಾರೆ. ಕೇವಲ ಪತ್ನಿ ಹಿತ ಕಾಯುವಲ್ಲಿ ನಿರತರಾಗಿದ್ದು ಚಿಕ್ಕೋಡಿ ಸಂಸದರ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಹೌದು ಚಿಕ್ಕೋಡಿಯ ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ, ನಿಪ್ಪಾಣಿಯ ಹಲವು ಗ್ರಾಮಗಳು ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿದ್ದು ಜನರ ಬದುಕು ಬೀದಿಗೆ ಬಿದ್ದಿದೆ. ಮನೆ, ಮಠ ಕಳೆದುಕೊಂಡು ಜನ ನಿರಾಶ್ರಿತರ ಶಿಬಿರಗಳಲ್ಲಿ ಬದುಕು ಸಾಗಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಮೌಲ್ಯ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಜನರ ನೋವು ಆಲಿಸಬೇಕಿದ್ದ ಸಂಸದರು ಕ್ಷೇತ್ರದತ್ತ ಮುಖ ಮಾಡದೇ ಅತ್ತ ಸಂಸತ್ತಿನಲ್ಲಿ ಜನಪರ ಧ್ವನಿ ಎತ್ತದಿರುವುದು ಜನರನ್ನು ಕೆರಳಿಸಿದೆ. ಈ ಸಂದರ್ಭದಲ್ಲಾದರು ನಮ್ಮ ನೋವು ಆಲಿಸದ ಸಂಸದರು ಮತ್ತೆ ಯಾವಾಗ ಬರುತ್ತಾರೆ ಎಂದು ಪ್ರಶ್ನೆಮಾಡುತ್ತಿದ್ದಾರೆ.

ನಿಪ್ಪಾಣಿಯೇ ಲೋಕಸಭಾ ಕ್ಷೇತ್ರವಾಯ್ತಾ ಸಂಸದರಿಗೆ : ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಇವರು ಇಡೀ ಜಿಲ್ಲೆಗೆ ಸಂಸದರಾ ಅಂಥವಾ ತಮ್ಮ ಪತ್ನಿ ಪ್ರತಿನಿಧಿಸುವ ನಿಪ್ಪಾಣಿ ಕ್ಷೇತ್ರಕ್ಕೆ ಮಾತ್ರ ಸಂಸದರಾ ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿರುವ ನಿರಾಶ್ರಿತರ ಸಂಕಷ್ಟ ಕೇಳದೆ ಕೇವಲ ನಿಪ್ಪಾಣಿ ಕ್ಷೇತ್ರದ ಸುತ್ತಾಟ ನಡೆಸುತ್ತಿದ್ದಾರೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಅಥಣಿ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೆ ಸಂಪೂರ್ಣ ಮುಳಗಿದ್ದರು ಅತ್ತ ಸಂಸದರು ತಲೆಯೆತ್ತಿ ನೋಡಿಲ್ಲ. ಅಷ್ಟೇ ಅಲ್ಲದೆ ಜನರನ್ನು ಸಮಾಧಾನಪಡಿಸುವ ಕೆಲಸ ಮಾಡದಿರುವುದು ವಿಪರ್ಯಾಸ.

ಸಂಸತ್ತಿನ ಗಮನ ಸೆಳೆಯುವಲ್ಲಿ ವಿಫಲ : ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರವಾಹ ಉಂಟಾಗಿದೆ. ಈಗಾಗಲೇ ಸಂಸತ್ತಿನ ಮಳೆಗಾಲದ ಅಧಿವೇಶನ ಕೂಡಾ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಪ್ರಧಾನಿ ಸೇರಿದಂತೆ ಸಂಬಂಧಪಟ್ಟ ಸಚಿವರ ಗಮನಸೆಳೆಯುವ ಕೆಲಸವನ್ನು ಸಂಸದರು ಮಾಡಿಲ್ಲ. ನಮ್ಮದೇ ಸಮಸ್ಯೆಗಳನ್ನು ದೇಹಲಿ ಮಟ್ಟದಲ್ಲಿ ತಿಳಿಸಿ ಪರಿಹಾರ ನೀಡಬೇಕಾದ ಸಂಸದರೇ ಈ ರೀತಿ ವರ್ತನೆ ಮಾಡುತ್ತಿದ್ದು ಯಾರಿಗೆ ಹೇಳುವುದು ನಮ್ಮ ನೋವು ಎಂದು ಕ್ಷೇತ್ರದ ಜನ ಪ್ರಶ್ನೆ ಮಾಡುತ್ತಿದ್ದಾರೆ.


2019 ರ ಪ್ರವಾಹ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಸಂತ್ರಸ್ತರ ಪತ್ರ : ಕಳೆದ ಒಂದು ವರ್ಷದ ಹಿಂದೆಯೂ ಕೃಷ್ಣಾ ನದಿ ಪಾತ್ರದ ಹಳ್ಳಿಗಳಲ್ಲಿ ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಮನೆಗಳು ನೆಲಸಮವಾಗಿದ್ದವು. ಆಗಿನ ಸರ್ಕಾರ ಸುಮಾರು ಐದು ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡೀತ್ತು. ಆದರೆ ಮತ್ತೊಂದು ಬಾರಿ ಪ್ರವಾಹ ಬಂದರು ಸರ್ಕಾರದಿಂದ ಯಾವುದೇ ಪರಿಹಾರ ಲಭ್ಯವಾಗಿಲ್ಲ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಜನ 2019 ರ ಪ್ರವಾಹ ಸಂದರ್ಭದಲ್ಲಿ ಬಿದ್ದ ಮನೆಗಳ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ಒಂದು ವರ್ಷದಿಂದ ಮನೆ ಕಳೆದುಕೊಂಡ ನಮಗೆ ಇರಲು ಜಾಗವಿಲ್ಲದೇ ಬಯಲಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆ.‌ ಈ ಕುರಿತು ಸಂಸದರಿಗೆ ಹಾಗೂ ಶಾಸಕರಿಗೆ ಮನವಿ ಮಾಡಿದರು ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.


ನಮ್ಮ ಕ್ಷೇತ್ರದ ಸಂಸದರು ಯಾರು ಎಂಬ ಪ್ರಶ್ನೆ ಮೂಡುತ್ತಿದೆ. ಪ್ರವಾಹದಿಂದ ಕಳೆದ ಹದಿನೈದು ದಿನಗಳಿಂದ ಮನೆ ಬಿಟ್ಟು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿದ್ದೇವೆ. ನಮ್ಮ ಕಗಷೇತ್ರದ ಸಂಸದರು ಈವರೆಗೆ ಬಂದಿಲ್ಲ. ಮತ ಕೇಳುವ ಸಂದರ್ಭದಲ್ಲಿ ತೋರುವ ಉತ್ಸಾಹ ಇಂತಹ ಕಷ್ಟದ ಸಂದರ್ಭದಲ್ಲಿ ಯಾಕೆ ತೋರಿಸುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ.

ಭರಮಪ್ಪ ಸೋಮಶೆಟ್ಟಿ – ಪ್ರವಾಹ ನಿರಾಶ್ರಿತ ಕಾಗವಾಡ




Advertisement

Leave a reply

Your email address will not be published. Required fields are marked *

error: Content is protected !!