
ಚಿಕ್ಕೋಡಿಗೆ ಪ್ರಿಯಾಂಕಾ, ಬೆಳಗಾವಿಗೆ ಮೃನಾಲ್ ; ಲೋಕಸಭಾ ಅಖಾಡ ಸಜ್ಜು

ಬೆಳಗಾವಿ : ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ರಾಷ್ಟ್ರೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈ ಮಧ್ಯೆ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಯಾರು ಎಂಬ ಚರ್ಚೆ ಜೋರಾಗಿದೆ. ಎರಡೂ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಖಾತೆ ನಿಭಾಯಿಸುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಅವರ ನಿರ್ಧಾರಕ್ಕೆ ಹೈಕಮಾಂಡ್ ಶರಣಾಗುವ ಸಾಧ್ಯತೆ ಹೆಚ್ಚಿದೆ.
ಚಿಕ್ಕೋಡಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೆಸರು ಘೊಷಣೆಯಾಗಿದ್ದು, ಬೆಳಗಾವಿ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರು ಬಹುತೇಕ ಪೈನಲ್ ಎಂದೇ ಹೇಳಲಾಗುತ್ತಿದೆ. ಇನ್ನೂ ಕಾಂಗ್ರೆಸ್ ಎರಡೂ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಾಟ ಮುಂದುವರಿಸಿದ್ದು ಬೆಳಗಾವಿಗೆ ಸಚಿವೆ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹಾಗೂ ಚಿಕ್ಕೋಡಿಗೆ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರನ್ನೇ ಕಣಕ್ಕೆ ಇಳಿಸಲು ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಲ ಖಾತೆ ಹೊಂದಿರುವ ಬೆಳಗಾವಿಯ ಇಬ್ಬರು ಸಚಿವರ ಮಕ್ಕಳಿಗೆ ಟಿಕೆಟ್ ನೀಡುತ್ತಾರೆ ಎಂಬ ಸುದ್ದಿಯ ನಡುವೆ, ಕೆಲವರು ಕಾರ್ಯಕರ್ತರ ಪಾಡು ಏನು? ಎಂಬ ವಾದ ಮುಂದಿಟ್ಟಿದ್ದಾರೆ. ಆದರೆ ಎರಡೂ ಕ್ಷೇತ್ರದಲ್ಲಿ ಗೆಲುವು ಒಂದೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಮುಖಂಡರು ಸಚಿವರ ಮಕ್ಕಳಿಗೆ ಟಿಕೆಟ್ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರದ ಬಿಜೆಪಿಯಲ್ಲಿನ ಒಳ ಜಗಳದ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿರುವುದಂತು ಸ್ಪಷ್ಟ.
ಸೋನ್ವಾಲ್ಕರ್ ಔಟ್ ; ಮೃನಾಲ್ ಹೆಬ್ಬಾಳ್ಕರ್ ಇನ್ : ಕೆಲ ದಿನಗಳ ಹಿಂದೆಯಷ್ಟೇ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಡಾ. ಗಿರೀಶ್ ಸೋನ್ವಾಲ್ಕರ್ ಅವರನ್ನೇ ಕಣಕ್ಕೆ ಇಳಿಸುವ ಲೆಕ್ಕಾಚಾರ ಹೊಂದಿತ್ತು. ಅಷ್ಟೇ ಅಲ್ಲದೆ ಕಾಂಗ್ರೆಸ್ ನ ಕೆಲ ಪ್ರಮುಖ ಜಿಲ್ಲಾ ನಾಯಕರು ಸಭೆ ನಡೆಸಿ ಗಿರೀಶ್ ಅಚರನ್ನೇ ಅಭ್ಯರ್ಥಿಯಾಗಿ ಮಾಡುವ ಕುರಿತು ಮಾತುಕತೆ ನಡೆದಿತ್ತು ಆದರೆ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಬಾರಿ ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಮಾತನಾಡುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹೆಬ್ಬಾಳ್ಕರ್ ಪರ ಬ್ಯಾಟ್ ಬೀಸಿದ್ದರು. ಇದಾದ ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಬೆಳಗಾವಿಗೆ ಮೃನಾಲ್ ಹೆಬ್ಬಾಳ್ಕರ್ ಅವರನ್ನೇ ಕಣಕ್ಕೆ ಇಳಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಜೊತಗೆ ಈಗಾಗಲೇ ಕ್ಷೇತ್ರದಲ್ಲಿ ಇವರು ಓಡಾಟವನ್ನು ನಡೆಸಿದ್ದು, ಕೆವಲ ಹೈಕಮಾಂಡ್ ನಿಂದ ಹೆಸರು ಘೋಷಣೆ ಮಾತ್ರ ಬಾಕಿಯಿದೆ ಎಂದು ಹೇಳಲಾಗುತ್ತಿದೆ.
ಇಬ್ಬರು ಸಚಿವರಿಗೆ ಪ್ರತಿಷ್ಠೆ ಪ್ರಶ್ನೆ : ಹೊಂದಾಣಿಕೆ ರಾಜಕಾರಣದ ತವರೂರು ಎಂದೇ ಕರೆಯುವ ಬೆಳಗಾವಿಯಲ್ಲಿ ಸಧ್ಯ ಇಬ್ಬರು ಸಚಿವರ ಮಕ್ಕಳು ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಒಂದುವೇಳೆ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಮಕ್ಕಳು ಚುನಾವಣೆ ಇಳಿದಿದ್ದೇ ಆದರೆ ತೀವ್ರ ಪೈಪೋಟಿ ಏರ್ಪಡುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಇಲ್ಲದೆ ಇಬ್ಬರು ಸಚಿವರಿಗೆ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳುವ ಪ್ರತಿಷ್ಠೆ ಎದುರಾಗುವ ಸಾಧ್ಯತೆ ಇದ್ದು ಇದಕ್ಕೆ ಬಿಜೆಪಿ ಯಾವ ಅಸ್ತ್ರ ಪ್ರಯೋಗಿಸುತ್ತದೆ ಎಂಬುದನ್ನು ಕಾದು ನೋಡಬೇಕು.
ಕತ್ತಿ ಸೆಳೆಯಲು ಲಿಂಗಾಯತ ಮುಖಂಡರ ಕಸರತ್ತು
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹಾಲಿ ಕಾಂಗ್ರೆಸ್ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಇಬ್ಬರೂ ಒಳತಂತ್ರ ಹೆಣೆಯುತ್ತಿದ್ದು ಬಿಜೆಪಿಗೆ ಏಟು ಕೊಡಲು ಮುಂದಾಗಿದ್ದಾರೆ. ಚಿಕ್ಕೋಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿಗೆ ಟಿಕೆಟ್ ಮಿಸ್ ಆಗಿದ್ದು ಅವರನ್ನು ಕಾಂಗ್ರೆಸ್ ಗೆ ಕರೆತರುವ ತಯಾರಿ ತೆರೆಮರೆಯಲ್ಲಿ ಜೋರಾಗಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಹೋದರನಿಗೆ ಟಿಕೆಟ್ ನೀಡುವಂತೆ ದಿ. ಉಮೇಶ್ ಕತ್ತಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹೈಕಮಾಂಡ್ ಬಳಿ ಲಾಬಿ ನಡೆಸಿದ್ದರು. ಆ ಸಂದರ್ಭದಲ್ಲಿ ರಮೇಶ್ ಕತ್ತಿ ಅವರಿಗೆ ರಾಜ್ಯಸಭಾ ಸದಸ್ಯ ಅಥವಾ 2024 ರ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈ ಬಾರಿಯೂ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನಲೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಕೈ ಪಕ್ಷ ಸೇರಲು ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.
Mrinal hebalkar, Laxmi hebalkar, Satish jarakiholi, Priyanka jarakiholi, Belagavi Lokasaba, BJP, Congress, Jarakiholi kutumba.