ಶೇಗುಣಸಿ ವಿರಕ್ತಮಠದ ಶ್ರೀಗಳ ಅಮೃತಮಹೋತ್ಸವ ನಿಮಿತ್ಯ ಬಸವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ
ಅಥಣಿ : ಮಠಗಳು ಉಳಿದರೆ ಮಾನವೀಯತೆಯ ಉಳಿಯುತ್ತದೆ, ಮಠಗಳು ಮಾನವರ ಸೇವೆಯ ಮಾಡುವ ಶ್ರದ್ಧಾ ಕೇಂದ್ರಗಳಾಗಿವೆ. ನಮ್ಮ ಸಂಸ್ಕೃತಿ, ಆಚಾರ,ವಿಚಾರಗಳಿಗೆ ಮಠ-ಮಾನ್ಯಗಳ ಮತ್ತು ಮಠಾಧೀಶರ ಮಾರ್ಗದರ್ಶನ ಇಂದಿನ ಅಗತ್ಯವಾಗಿದೆ ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ತಾಲೂಕಿನ ಶೇಗುಣಸಿ ವಿರಕ್ತಮಠದ ಶಂಕರ ಮಹಾಸ್ವಾಮಿಗಳ ಅಮೃತಮಹೋತ್ಸವ ಹಾಗೂ ಡಾ. ಮಹಾಂತ ದೇವರು ಅವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಒಂದು ತಿಂಗಳ ಪರ್ಯಂತ ಆರಂಭವಾದ ಬಸವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಠಗಳು
ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿವೆ. ಭಾವೈಕ್ಯತೆ ಮತ್ತು ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಮೂಲಕ ತ್ರಿವಿಧ ದಾಸೋಹ ಮಾಡುತ್ತಿವೆ. ಅಂತಹ ಮಠಗಳಲ್ಲಿ ಶೇಗುಣಸಿಯ ವಿರಕ್ತಮಠ ಒಂದಾಗಿದ್ದು, ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಸುಕ್ಷೇತ್ರ ಶೇಗುಣಸಿಯ ವಿರಕ್ತಮಠದ ಬಸವಾದಿ ಪ್ರಮಥರ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ. ಶ್ರೀಮಠದ ಗುರುಶಿಷ್ಯ ಪರಂಪರೆಯನ್ನು ಮುನ್ನಡೆಸಿದ ಶ್ರೀ ಶಂಕರ ಮಹಾಸ್ವಾಮೀಜಿ ಅವರು ತ್ರಿಕಾಲ ಲಿಂಗಪೂಜಾ ನಿಷ್ಠರು, ಸದಾಚಾರ ಸದ್ವಿಚಾರ ಸಂಪನ್ನರು. ಶಿಕ್ಷಣ ಪ್ರೇಮಿಗಳಾಗಿ ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು.
ಅಂತಹ ಶ್ರೀಗಳು 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಆನಂದ ಮತ್ತು ಅಭಿಮಾನದ ಸಂಗತಿಯಾಗಿದೆ. ಇದೇ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಿರುವ ಯುವಯತಿಗಳಾದ ಡಾ. ಮಹಾಂತ ದೇವರು ಅವರಿಗೆ ನಿರಂಜನ ಚರಪಟ್ಟಾಧಿಕಾರ ಸಮಾರಂಭ ಜರುಗುತ್ತಿರುವುದು ಅತ್ಯಂತ ಆನಂದದ ಸಂಗತಿಯಾಗಿದೆ. ಶ್ರೀಮಠದಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಬಸವ ಪುರಾಣ ಕೇಳುವ ಮೂಲಕ ಸನ್ಮಾರ್ಗ ಹೊಂದಬೇಕೆಂದು ಹೇಳಿದರು.
ಬೆಲ್ಲದ ಬಾಗೇವಾಡಿ ಶಿವಾನಂದ ಸ್ವಾಮೀಜಿ ಮಾತನಾಡಿ ಅಪರಿಮಿತ ಕತ್ತಲೊಳಗೆ ವಿಪರೀತದ ಬೆಳಕು ವಿಶ್ವಗುರು ಬಸವಣ್ಣನವರು. ಅಂತಹ ಮಹಾನ ಮಾನವತಾವಾದಿ, ಜಗತ್ತಿಗೆ ಜ್ಯೋತಿಯಾದ ಬಸವಣ್ಣನವರ ಕುರಿತು ಸೇಗುಣಸಿ ಮಠದಲ್ಲಿ ಬಸವಪುರಾಣ ಆರಂಭವಾಗಿರುವುದು ಈ ಭಾಗದ ಭಕ್ತರ ಸುದೈವ. ಬಸವಪುರಾಣ ಕೇಳುವುದರಿಂದ ನಮ್ಮಲ್ಲಿನ ಅಜ್ಞಾನ ದೂರಾಗಿ ಸುಜ್ಞಾನ ನೆಲೆಸುತ್ತದೆ ಎಂದು ಹೇಳಿದರು.
ಶೇಗುಣಸಿ ವಿರಕ್ತಮಠದ ಉತ್ತರಾಧಿಕಾರಿ ಪೂಜ್ಯ ಡಾ.ಮಹಾಂತ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಪ್ರವಚನಕಾರರಾಗಿ ಹಂದಿಗುಂದ ಶಿವಾನಂದ ಸ್ವಾಮೀಜಿ, ಚಿಮ್ಮಡ ಪ್ರಭು ಸ್ವಾಮೀಜಿ, ಹಳ್ಯಾಳ ದ ಗುರುಸಿದ್ಧ ಸ್ವಾಮೀಜಿ, ಹಾವೇರಿಯ ಪೂಜ್ಯರು, ಹುಕ್ಕೇರಿಯ ಪೂಜ್ಯರು ಸೇರಿದಂತೆ ಮಾಜಿ ಜಿ.ಪಂ ಸದಸ್ಯರಾದ ಶ್ರೀಶೈಲ ನಾರಗೊಂಡ, ತಮ್ಮಣ್ಣಪ್ಪ ತೇಲಿ, ರೈತ ಮುಖಂಡ ಶಿವರಾಯ ಯಲಡಗಿ, ಪರಗೌಡ ರಾಚಪ್ಪನವರ, ವೆಂಕಪ್ಪ ಬನ್ನಿಕೊಪ್ಪ, ಕುಮಾರ ಸತ್ತಿಗೌಡರ, ಅಶೋಕ ತಮ್ಮಣ್ಣವರ, ಲಕ್ಷ್ಮಣ ಆಲೂರ, ಶಿವಾನಂದ ಸಸಾಲಟ್ಟಿ ಇನ್ನಿತರರು ಉಪಸ್ಥಿತರಿದ್ದರು.