9 ತಿಂಗಳ ವನವಾಸ ಅಂತ್ಯ, ಹಿಂಡಲಗಾ ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ
ಬೆಳಗಾವಿ : ಧಾರವಾಡ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ತಿಂಗಳಿನಿಂದ ಜೈಲುವಾಸ ಅನುಭವಿಸಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಹಿಂಡಲಗಾ ಜೈಲಿನಿಂದ ಹೊರಬಂದರು.
ನಗರದ ಹಿಂಡಲಗಾ ಜೈಲು ಆವರಣದಲ್ಲಿ ಶನಿವಾರ ಬೆಳಗಿನ ಜಾವ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿನಯ್ ಕುಲಕರ್ಣಿ ಅಭಿಮಾನಿಗಳು ತಮ್ಮ ನಾಯಕನಿಗಾಗಿ ಕಾಯುತ್ತಿತ್ತದು. ಸುಮಾರು 11 ಘಂಟೆಗೆ ವಿನಯ್ ಜಾಮೀನು ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದ ನಂತರ ತಮ್ಮ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಜೈಲು ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಿಡುಗಡೆಗೊಳಿಸಿದರು. ವಾರಕ್ಕೆ ಎರಡು ಬಾರಿ ಸಿಬಿಐ ಕಚೇರಿಯಲ್ಲಿ ಸಹಿ ಹಾಕಬೇಕಾದ ಆದೇಶ ಇರುವುದರಿಂದ ವಿನಯ್ ಕುಲಕರ್ಣಿ ಬಿಡುಗಡೆ ನಂತರ ಬೆಂಗಳೂರಿಗೆ ತೆರಳಿದರು.
ವಿನಯ್ ಕುಲಕರ್ಣಿ ಅವರನ್ನು ಸ್ವಾಗತಿಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಂಡಲಗಾ ಜೈಲಿಗೆ ಆಗಮಿಸಿದ್ದರು. ನನ್ನ ಸಹೋದರರಾಗಿರುವ ವಿನಯ್ ಕುಲಕರ್ಣಿ ಕೇವಲ ಒಂದು ಕ್ಷೇತ್ರದ ಮುಖಂಡರಲ್ಲ ಅವರೊಬ್ಬ ರಾಜ್ಯಮಟ್ಟದ ನಾಯಕ. ಇವರ ಬಿಡುಗಡೆಯಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಸಿಕ್ಕಿದೆ ಎಂದರು. ರಕ್ಷಾಬಂಧನ ಹಬ್ಬದ ಹಿನ್ನಲೆಯಲ್ಲಿ ವಿನಯ್ ಕುಲಕರ್ಣಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಖಿ ಕಟ್ಟಿ ಶುಭಾಶಯ ಕೋರಿದರು.
ಪ್ರಕರಣದ ಹಿನ್ನಲೆ : 2016 ಜೂನ್ 15 ರಂದು ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಹಾಗೂ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು 2020ರ ನವೆಂಬರ್ 5 ರಂದು ಸಿಬಿಐ ತಂಡ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಹೈಕೋರ್ಟ್ ನಲ್ಲಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸದ್ದರು ಕೋರ್ಟ್ ತಿರಸ್ಕಾರ ಮಾಡಿತ್ತು. ಪುನಃ ಸುಪ್ರೀಂ ಕೋರ್ಟ್ ಮೆಟ್ಟಿಲೆರಿದ ವಿನಯ್ ಪರ ವಕೀಲರು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿನಯ್ ಬೆಂಬಲಿಗರಿಂದ ಕೊವಿಡ್ ನಿಯಮ ಉಲ್ಲಂಘನೆ : ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ನಡುವೆಯೂ ಶನಿವಾರ ವಿನಯ್ ಕುಲಕರ್ಣಿ ಬೆಂಬಲಿಗರು ನಿಯಮವನ್ನು ಗಾಳಿಗೆ ತೂರಿ ಸಂಭ್ರಮಾಚರಣೆ ಮಾಡಿದ್ದಾರೆ. ಹಿಂಡಲಗಾ ಜೈಲು ಮುಂಬಾಗ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿನಯ್ ಬೆಂಬಲಿಗರು ಮಾಸ್ಕ್ ಹಾಕದೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದರು. ಕೊರೊನಾ ಲಾಕ್ ಡೌನ್ ನಡುವೆಯೂ ಪೊಲೀಸ್ ಇಲಾಖೆ ಈ ರೀತಿಯ ಸಂಭ್ರಮಾಚರಣೆಗೆ ಅವಕಾಶ ಮಾಡಿ ಕೊಟ್ಟಿರುವುದಯ ಎಷ್ಟು ಸರಿ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಷರತ್ತು ಬದ್ಧ ಜಾಮೀನು : ಯೋಗೇಶ್ ಗೌಡ ಕೊಲೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಪ್ರಮುಖವಾಗಿ, ಧಾರವಾಡಕ್ಕೆ ವಿನಯ್ ಕಾಲಿಡುವಂತಿಲ್ಲ. ಸಾಕ್ಷ್ಯ ನಾಶಕ್ಕೆ ಯತ್ನ ನಡೆಸುವಂತಿಲ್ಲ. ವಾರಕ್ಕೆ ಎರಡು ಬಾರಿ ಸಿಬಿಐ ಕಚೇರಿಯಲ್ಲಿ ಸಹಿ ಮಾಡಬೇಕು ಎಂಬ ಸೂಚನೆಯನ್ನು ಕೋರ್ಟ್ ನೀಡಿದೆ.
ನಾನು, ನನ್ನ ಕುಟುಂಬಸ್ಥರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯ ಎಲ್ಲ ಮುಖಂಡರು, ನನ್ನ ಕ್ಷೇತ್ರದ ಜನರರು, ಅಭಿಮಾನಿಗಳು ಸಾಕಷ್ಟ ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುತ್ತೇನೆ.
ನಾನು ಇಂದು ನಿನ್ನೆಯಿಂದ ರಾಜಕೀಯ ಮಾಡಿದವಲ್ಲ. ರೈತ ಕುಟುಂಬದಿಂದ, ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದವನು. ಇದು ನನ್ನ ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯವಾಗಿದೆ. ನಾನು ನನ್ನ ಕ್ಷೇತ್ರದ ಜನ ನನ್ನ ನಂಬಿದ ಜನರಿಗೆ ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂಥ ಹೋರಾಟಕ್ಕೂ ಸಿದ್ಧನಾಗಿರುತ್ತೇನೆ.
ವಿನಯ್ ಕುಲಕರ್ಣಿ
ಮಾಜಿ ಸಚಿವ