ತಡರಾತ್ರಿ ದಲಿತ ಸಚಿವರ ಮೀಟಿಂಗ್ ; ಸಿದ್ದು ಕುರ್ಚಿಗೆ ಕಂಟಕ..?
ಬೆಂಗಳೂರು : ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ದಿನಗಳೆದಂತೆ ಉರುಳು ಜಾಸ್ತಿಯಾಗುತ್ತಿದೆ. ಒಂದುಕಡೆ ಲೋಕಾಯುಕ್ತ ತನಿಖೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ. ಈ ಬೆಳವಣಿಗೆ ಮಧ್ಯೆ ಸಿದ್ದು ಸರ್ಕಾರದ ಪ್ರಮುಖ ದಲಿತ ಸಚಿವರು ಮಿಡ್ ನೈಟ್ ಮೀಟಿಂಗ್ ಮಾಡಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ.
ಹೌದು ಈಗಾಗಲೇ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ತಮ್ಮ 14 ಸೈಟ್ ಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ನೀಡಿದ್ದಾರೆ. ಈ ಕುರಿತು ಮುಡಾ ಎಲ್ಲಾ ಸೈಟ್ ಗಳನ್ನು ವಾಪಸ್ ಪಡೆದುಕೊಂಡಿದೆ. ಈ ಮಧ್ಯೆ ಸಿಎಂ ಕಾನೂನು ಹೋರಾಟ ಮುಂದುವರಿಸಿದ್ದು ಜಾರಿ ನಿರ್ದೇಶನಾಲಯದ ನಿರ್ಧಾರ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹತ್ವದ ಖಾತೆ ಹೊಂದಿರುವ ಮೂವರು ದಲಿತ ಸಚಿವರು ಮಂಗಳವಾರ ತಡರಾತ್ರಿ ಮಹತ್ವದ ಸಭೆ ನಡೆಸಿದ್ದು ಬಾರೀ ಕುತೂಹಲ ಮೂಡಿಸಿದೆ. ಈ ಕಾರಣಕ್ಕೆ ಸಿಎಂ ಖುರ್ಚಿಗೆ ಕಂಟಕ ಬಂತಾ ಎಂಬ ಅನುಮಾನ ಮೂಡಲು ಪ್ರಾರಂಭಿಸಿದೆ. ಆದರೆ ಒಂದುವೇಳೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಎದುರಾದರೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಚರ್ಚೆ ಸಚಿವರ ಮಧ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿಕೊಂಡು ಸಚಿವ ಹೆಚ್.ಸಿ ಮಹಾದೇವಪ್ಪ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಮುಂಬರುವ ಸಿಎಂ ಹುದ್ದೆ ಕುರಿತು ಮಹತ್ವದ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸಿಎಂ ಬದಲಾವಣೆ ಪರಿಸ್ಥಿತಿ ಎದುರಾದರೆ ಯಾವೆಲ್ಲ ಕಾರ್ಡ್ ಪ್ಲೇ ಮಾಡಬೇಕು ಎಂಬ ಚರ್ಚೆಯನ್ನು ನಾಯಕರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲ ದಶಕಗಳಿಂದ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಚರ್ಚೆ ಜೋರಾಗಿದೆ. ಈ ಮಧ್ಯೆ ಅನೇಕ ನಾಯಕರು ದಲಿತ ಸಿಎಂ ಕುರಿತು ಚರ್ಚೆಯಲ್ಲಿ ಆಗಾಗ್ಗೆ ಗುರುತಿಸಿಕೊಂಡಿದ್ದಾರೆ. ಸಧ್ಯ ಮೂವರು ಪ್ರಮುಖ ದಲಿತ ಸಚಿವರ ಸಭೆಯಿಂದ ಕಾಂಗ್ರೆಸ್ ಪಾಳೆಯದಲ್ಲಿ ಒಂದು ರೀತಿಯ ಚರ್ಚೆ ನಡೆಯುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಸಭೆ ನಡೆಸಿದ್ದ ಸಚಿವ ಪರಮೇಶ್ವರ್ ಸಧ್ಯ ಮತ್ತೊಂದು ಸಭೆ ನಡೆಸಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ನಿನ್ನೆ ತಡರಾತ್ರಿ ಸತೀಶ್ ಜಾರಕಿಹೊಳಿ, ಪರಮೇಶ್ವರ ಹಾಗೂ ಮಹದೇವಪ್ಪ ಚರ್ಚೆ ನಡೆದಿದ್ದಾರೆ. ಸರ್ಕಾರಕ್ಕೆ ಡ್ಯಾಮೇಜ್ ಆಗುವ ಸ್ಥಿತಿ ಬಂದರೆ ಹೇಗೆ ತಂತ್ರಗಾರಿಕೆ ಮಾಡಬೇಕು ಎಂಬ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ ಎನ್ನಲಾಗಿದ್ದು. ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಹೆಚ್ ಸಿ ಮಹದೇವಪ್ಪ ಕಣ್ಣು ನೆಟ್ಟಿದ್ದಾರೆ.
ಮುಡಾ ಹಗರಣದಲ್ಲಿ ಮತ್ತೊಂದು ಇಸಿಐಆರ್ ದಾಖಲಾಗಿದೆ. 18 ಅಧಿಕಾರಿಗಳ ವಿರುದ್ಧ ECIR ದಾಖಲಿಸಿದ್ದಾರೆ ಇ.ಡಿ ಅಧಿಕಾರಿಗಳು.. 2022 ರಲ್ಲಿ ಲೋಕಾಯುಕ್ತ ದಾಖಲಿಸಿದ್ದ ಪ್ರಕರಣದಲ್ಲಿ ಹಿನಕಲ್ ಸರ್ವೇ ನಂಬರ್ 89ರ ನಿವೇಶನ ಹಂಚಿಕೆ ಹಗರಣದ ಬಗ್ಗೆ ಇಡಿ ಅಖಾಡಕ್ಕೆ ಇಳಿದಿದೆ. 7.18 ಎಕರೆ ಜಮೀನನ್ನು ನಿವೇಶನ ಮಾಡಲಾಗಿತ್ತು. 350 ಕ್ಕೂ ಹೆಚ್ಚು ಪ್ರಭಾವಿಗಳಿಗೆ ಸೈಟ್ ಹಂಚಿಕೆ ಆರೋಪ ಕೇಳಿಬಂದಿದೆ.. 2017ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ವಿರುದ್ಧ ಇಸಿಐಆರ್ ದಾಖಲಾಗಿದೆ.