
ಧರೆ ತೊರೆದ ಆರ್. ಎಸ್. ದರ್ಗೆ – ಅಗಲಿದ ಚೇತನಕ್ಕೆ ಅಕ್ಷರ ನಮನ

ಅದು 2014-16ರ ಪರ್ವ, ನಾನು ಇಂಜೀನಿಯರಿಂಗ್ ವಿದ್ಯಾರ್ಥಿ. ಬೆಳಗಾವಿಗೆ ತುಂಬಾ ಹೊಸಬ. ಎಬಿವಿಪಿಯ ನಗರ ಸಹ ಕಾರ್ಯದರ್ಶಿ ಜವಬ್ದಾರಿ ಹೊತ್ತು, ನಗರದ ವಿದ್ಯಾರ್ಥಿ ಸಮೂಹದೊಟ್ಟಿಗೆ ಕೆಲಸ ಮಾಡುತ್ತಿದೆ.
ಎಬಿವಿಪಿ ವತಿಯಿಂದ ಏನಾದರೂ ಹೋರಾಟ ಮತ್ತು ಕಾರ್ಯಕ್ರಮ ಮಾಡಿದರೆ, ಆ ವರದಿಯನ್ನು ಬೆಳಗಾವಿಯ ಎಲ್ಲ ಪತ್ರಿಕಾ ಮಾಧ್ಯಮದವರಿಗೆ ತಲುಪಿಸುವ ಹೊಣೆ ನನ್ನ ಹೆಗಲಿಗೆ ಇತ್ತು. ಹೀಗೆ ವರದಿ ಮತ್ತು ಕಾರ್ಯಕ್ರಮದ ಫೋಟೊ ಹೊತ್ತು, ವಿದ್ಯಾರ್ಥಿ ಪರಿಷತ್ತಿನ ಬೈಕಿನ ಮೇಲೆ ಬೆಳಗಾವಿ ನಗರದ ಮೂಲೆ ಮೂಲೆ ಹುಡುಕಿ, ಮಿಡೀಯಾ ಮನೆಗಳನ್ನು ತಲುಪುವಾಗ ದೊರಕಿದವರೇ ನಮ್ಮ ಆರ್. ಎಸ್. ದರ್ಗೆ ಅವರು.
ಆಗ ಇವರು ಹೊಸ ದಿಗಂತ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರು. ನಾ ಕಂಡ ಅತ್ಯಂತ ಸರಳ, ಸಜ್ಜನ ಮತ್ತು ಪ್ರಾಮಾಣಿಕ ಪತ್ರಕರ್ತರಲ್ಲಿ ಇವರೋರ್ವರು. ಸದಾ ಹಸನ್ಮುಖರಾಗಿರುತ್ತಿದ್ದರು. ನಗರದ ಖಡೇ ಬಜಾರ್ ಪೋಲಿಸ್ ಠಾಣೆಯ ಮೂಲೆಯ ಒಂದು ಸಣ್ಣ ಕೊಠಡಿಯೇ ಇವರ ಆಫೀಸು. ನಾನು ಯಾವಾಗಲಾದರೂ ಆ ಕಡೆ ಹೋದರೆ ಸುಮಾರು ಒಂದು ಗಂಟೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡುತ್ತಿದ್ದೇವು.
ದರ್ಗೆಯವರು ಪಕ್ಕಾ ಬಸವತತ್ವವಾದಿಗಳು. ಬುದ್ಧ, ಬಸವ, ಅಂಬೇಡ್ಕರರವರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು. ಸೈದ್ದಾಂತಿಕವಾಗಿ ವಿಶಿಷ್ಟ ವಿಚಾರಧಾರೆಯುಳ್ಳವರಾಗಿದ್ದರೂ ಸಂಘದ ಹೊಸ ದಿಗಂತ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದದ್ದು ವಿಶೇಷ. ದೇಶದ ವಿಚಾರ ಬಂದಾಗ ಪ್ರಖರವಾಗಿ ತಮ್ಮ ವಿಚಾರವನ್ನು ವಿಶ್ಲೇಷಿಸುತ್ತಾ, ನಮ್ಮ ಜೊತೆಗೆ ನಿಲ್ಲುತ್ತಿದ್ದರು. ನಮ್ಮ ಈ ಸಂವಾದದಲ್ಲಿ ಆಗಾಗ ಹೊಸ ದಿಗಂತ ಪತ್ರಿಕೆಯ ಜಾಹೀರಾತು ಏಜೆಂಟರಾದ ಸಂದೀಪ ಅವರು ಕೂಡಾ ಇರುತ್ತಿದ್ದರು.
ದರ್ಗೆಯವರು ಹೇಳುವ ಪ್ರಕಾರ ಪತ್ರಿಕೋದ್ಯಮ ಎಂದರೇ ಸಮಾಜಕ್ಕೆ ಹಿಡಿದ ಕನ್ನಡಿಯಂತಿರಬೇಕು. ಇದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಜೊತೆಗೆ ದೀನ, ದಲಿತ, ಧಮನಿತರ ಧ್ವನಿಯಂತಿರಬೇಕು ಎನ್ನುತ್ತಿದ್ದರು. ವಿಪರ್ಯಾಸವೆಂದರೇ ವರ್ತಮಾನದಲ್ಲಿದಲ್ಲಿ ಪತ್ರಿಕೋದ್ಯಮವು ದಾರಿ ತಪ್ಪಿ, ದುಡ್ಡಿನ ಕುದುರೆಯೇರಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಗಿರೀಶ್ ನಾನು ಇವತ್ತಿಗೂ ಒಂದು ರೂಪಾಯಿಯನ್ನು ಜನರಿಂದ ಪತ್ರಿಕೆ ಹೆಸರಿನಲ್ಲಿ ಸುಲಿಗೆ ಮಾಡಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ದರ್ಗೆಯವರಿಗೆ ಎರಡು ಮಕ್ಕಳು. ಆಗ ಕಾಲೇಜು ಶಿಕ್ಷಣ ಪಡೆಯುತ್ತಿದ್ದರು ಎಂಬುದು ನನ್ನ ನೆನಪು. ಒಂದು ಪುಟ್ಟ ಮನೆ, ಅದೇ ಪುಟ್ಟ ಮನೆಯಲ್ಲಿಯೇ ಇವರ ಸುಖ ಸಂಸಾರ. ಕೆಲವೊಮ್ಮೆ ಸೈಕಲ್, ಇನ್ನು ಕೆಲವೊಮ್ಮೆ ಕಾಲ್ನಡಿಗೆ. ಒಂದು ಬಿಳಿ ಜುಬ್ಬಾ, ಪಾಯಜಾಮ್ ಜೊತೆಗೆ ಹವಾಯಿ ಚಪ್ಪಲಿ. ಹೀಗೆ ಅತೀ ಸರಳತೆಯಿಂದ ಇರುತ್ತಿತ್ತು ಅವರ ಜೀವನ. ಎಷ್ಟೋ ಬಾರಿ ತಿಂಗಳ ಸಂಬಳ ತಡವಾದರೇ ಕಷ್ಟವಾಗುತ್ತಿತ್ತು ಅವರ ಜೀವನ ನಿತ್ಯಕ್ರಮ. ಮಕ್ಕಳ ವಿದ್ಯಾಭ್ಯಾಸಕ್ಕೂ ಅವರು ಎಷ್ಟೋ ಬಾರಿ ಕಷ್ಟ ಪಟ್ಟದನ್ನು ನಾನು ಕಂಡಿದ್ದೇನೆ ಮತ್ತು ಸ್ವತಃ ಅವರೇ ಹಂಚಿಕೊಂಡಿದ್ದರು.
ದರ್ಗೆಯವರು ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪ್ರತಿ ವರ್ಷ ಬಸವಾದಿ ಶರಣರ ಹೆಸರಿನಲ್ಲಿ, ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಅವರ ಬಸವ ಭೀಮ ಸೇನೆ ಸಂಸ್ಥೆ ವತಿಯಿಂದ ಪ್ರಶಸ್ತಿ ನೀಡಿ ಪ್ರಶಂಸಿಸುತ್ತಿದ್ದರು. ಅದಲ್ಲದೇ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬ ಹೋರಾಟದ ಮುಂಚೂಣಿಯಲ್ಲೂ ಭಾಗಿಯಾಗಿದ್ದರು. ಬಸವ ಜಯಂತಿ, ಬಸವ ಪಂಚಮಿ, ಅಂಬೇಡ್ಕರ್ ಜಯಂತಿ ಮತ್ತು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಲಿಂಗಾಯತ ಧರ್ಮ ಸಂಘಟಿಸುವಲ್ಲಿ ಸಿದ್ಧಹಸ್ತರಿದ್ದರು.
ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದ ದರ್ಗೆಯವರು ಇಂದು ನಮ್ಮನ್ನು ಅಗಲಿ ಹೋಗಿದ್ದು ಅತ್ಯಂತ ದುಃಖಕರ ಸಂಗತಿ. ಇಂದು ಬೆಳಗಾವಿ ಜಿಲ್ಲೆಯ ಒಂದು ಹಿರಿಯ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿದಂತಾಗಿದೆ. ಅಗಲಿದ ಆತ್ಮಕ್ಕೆ ಚಿರಶಾಂತಿ ಮತ್ತು ಕುಟುಂಬ ವರ್ಗದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸಂಪಾದಕರು – ಬೆಳಗಾವಿ ವಾಯ್ಸ್