ಶಿವಾನಂದ ನೀಲಣ್ಣನವರ ವಿರುದ್ಧ ಕಾಗವಾಡದಲ್ಲಿ ಪ್ರಕರಣ ದಾಖಲು..!

ಬೆಳಗಾವಿ : ಶಿವಂ ಅಸೋಶಿಯೇಟ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ಕೇಳಿಬಂದಿರುವ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮೊದಲ ಖಾಸಗಿ ದೂರು ದಾಖಲಾಗಿದೆ.
ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬ ಹೂಡಿಕೆದಾರ ದೂರು ನೀಡಿದ್ದು, ಶೇ.36 ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ತನ್ನಿಂದ ₹5 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಎಪ್ರಿಲ್ ತಿಂಗಳಲ್ಲಿ ಹಂತ ಹಂತವಾಗಿ ₹5 ಲಕ್ಷ ಹಣವನ್ನು ಶಿವಾನಂದ ನೀಲಣ್ಣವರ ಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಬಳಿಕ ಠೇವಣಿ ಹಣಕ್ಕೆ ಭರವಸೆ ನೀಡಿದಂತೆ ಬಡ್ಡಿ ಹಾಗೂ ಹಣ ಮರಳಿ ನೀಡದೆ ವಂಚನೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೆತ್ತಿಕೊಂಡಿರುವ ನಡುವೆಯೇ ಶಿವಾನಂದ ನೀಲಣ್ಣವರ ವಿರುದ್ಧ ದಾಖಲಾಗಿರುವ ಮೊದಲ ಅಧಿಕೃತ ಪ್ರಕರಣ ಇದಾಗಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

