ಒಂದೇ ಮಳೆಗೆ ನಿರ್ಮಾಣ ಹಂತದ ಸೇತುವೆ ಮುಳುಗಡೆ : ಅಧಿಕಾರಿಗ ಕಾರ್ಯವೈಖರಿಗೆ ಜನ ಆಕ್ರೋಶ

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಬಳಿ ಹಾದು ಹೋಗುವ ಬೈಲಹೊಂಗಲ–ಮುನವಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದ ನಿರ್ಮಾಣ ಹಂತದಲ್ಲಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಮುತವಾಡ, ಇಂಚಲ, ಮುರಗೋಡ ಹಾಗೂ ನೇಸರಗಿಯಿಂದ ಹಲಕಿ ಕ್ರಾಸ್‌ವರೆಗೆ ರಾಜ್ಯ ಹೆದ್ದಾರಿಯ ಬಲಭಾಗದ ಮಳೆ ನೀರು ಹೊಸೂರ ಗ್ರಾಮದ ಸಮೀಪದ ಯಕ್ಕುಂಡಿ ಸೇತುವೆ ಮೂಲಕ ಹರಿದು ಮಲಪ್ರಭಾ ನದಿಗೆ ಸೇರುತ್ತದೆ.
ಸೋಮವಾರ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಯಕ್ಕುಂಡಿ ಸೇತುವೆ ಎಂದು ಕರೆಯಲಾಗುವ ಈ ಕಿರು ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ಸಂಚಾರ ಸ್ಥಗಿತಗೊಂಡಿದೆ.
ಈ ಭಾಗದ ಜನರು ಪ್ರತಿ ಮಳೆಗಾಲದಲ್ಲಿ ಸೇತುವೆ ಮುಳುಗುವ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರು. ಇದರಿಂದ ಸೋಗಲಕ್ಷೇತ್ರ, ಮಾಟೋಳ್ಳಿ, ಮಲ್ಲೂರು, ಸೋಗಲ, ಯಕ್ಕುಂಡಿ, ದುಪದಾಳ, ಕಾರ್ಲಕಟ್ಟಿ, ಬಡ್ಲಿ, ಕಾತ್ರಾಳ, ಗೊಂದಿ ಸೇರಿದಂತೆ ಅನೇಕ ತಾಂಡಾಗಳ ಜನರು ಹಾಗೂ ಬೈಲಹೊಂಗಲ–ಮುನವಳ್ಳಿ ಮಾರ್ಗದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದರು.
ಸಮಸ್ಯೆ ಗಮನಿಸಿದ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪ್ರಯತ್ನದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ ಹಲವು ತಿಂಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.
ತಾತ್ಕಾಲಿಕ ಸೇತುವೆ ಮರು ನಿರ್ಮಾಣವಾಗುವವರೆಗೆ ಈ ರಸ್ತೆಯಲ್ಲಿ ಸಂಚಾರ ಕಷ್ಟಸಾಧ್ಯವಾಗಿದ್ದು, ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅನುಭವ ಹೊಂದಿದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ ಶೀಘ್ರಗತಿಯಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

