ಬಡವರ ಮನೆಗೆ ಬೆಳಕಾದ ಗೃಹಲಕ್ಷ್ಮೀ ; ಸಾರ್ಥಕ ಕ್ಷಣವೆಂದ ಸಚಿವೆ ಹೆಬ್ಬಾಳಕರ್
ಬೆಳಗಾವಿ : ಕುಕಡೊಳ್ಳಿ ಗ್ರಾಮದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣ ಕೂಡಿಟ್ಟು, ಮಿರ್ಚಿ ಮಿಕ್ಸರ್ ಮಷಿನ್ (ಖಾರದ ಗಿರಣಿ) ಖರೀದಿಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಮಷಿನ್ ಉದ್ಘಾಟಿಸಿ, ಮಹಿಳೆಯ ನೂತನ ಉದ್ಯಮಕ್ಕೆ ಶುಭ ಕೋರಿದರು.
ತಾಯವ್ವ ಕ. ಲಕಮೋಜಿ ಎಂಬ ಮಹಿಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಿಂದ ಭವಿಷ್ಯ ಕಟ್ಟಿಕೊಳ್ಳಲು ಮುಂದಾದವರು. ಅವರ ಒತ್ತಾಸೆಯ ಮೇರೆಗೆ ಸಚಿವರು ಕುಕಡೊಳ್ಳಿಗೆ ತೆರಳಿ ನೂತನ ಯಂತ್ರ ಉದ್ಘಾಟಿಸಿದರು.
ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಗೃಹಲಕ್ಷ್ಮೀ ಸುಧಾರಣೆಗೊಳಿಸಿದ್ದು, ಸಾಕಷ್ಟು ಬಡ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿವೆ. ಯೋಜನೆಯ ಸಾರ್ಥಕತೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಚನ್ನಬಸಯ್ಯ ಹಿರೇಮಠ್, ಬಸಯ್ಯ ಚಿಕ್ಕಮಠ್, ವೀರನಗೌಡ ಪಾಟೀಲ, ತಾಯಪ್ಪ ಮರಕಟ್ಟಿ, ಪುಂಡಲೀಕ ಬೈರೋಜಿ, ಕಲ್ಲಪ್ಪ ವಡ್ಡಿನ, ಪರಶುರಾಮ ಕುರುಬರ, ಅನ್ನಪೂರ್ಣ ಪಾಟೀಲ, ಗದಿಗೆಪ್ಪ ವಡ್ಡಿನ, ದೊಡ್ಡಪ್ಪ ದೇಶನೂರ್, ರಾಮಪ್ಪ ಕರವಿನಕೊಪ್ಪ, ಹೊಳೆಪ್ಪ ಹಟ್ಟಿ ಹಾಗೂ ಗ್ರಾಮದ ಅನೇಕ ಮಹಿಳೆಯರು ಉಪಸ್ಥಿತರಿದ್ದರು.