ಬೆಳಗಾವಿ : ನಕಲಿ ಬಂಗಾರದ ಆಭರಣ ತೋರಿಸಿ ವಂಚಿಸುವ ಮೂಲಕ ಮಹಿಳೆಯಿಂದ ಬಂಗಾರದ ಆಭರಣ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ರಾಯಬಾಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಮುಧೋಳ ಆಸ್ಪತ್ರೆ ರಸ್ತೆಯಲ್ಲಿ ಜೂನ್ 15 ರಂದು ಇಬ್ಬರು ಆರೋಪಿಗಳು ನಕಲಿ ಬಂಗಾರದ ಆಭರಣ ತೋರಿಸಿ ಮಹಿಳೆಗೆ ವಂಚನೆ ಮಾಡಿದ್ದಲ್ಲದೆ 10 ಗ್ರಾಂ ಅಸಲಿ ಬಂಗಾರದ ಆಭರಣ ಎಗರಿಸಿ ಪರಾರಿ ಆಗಿದ್ದರು.

ಈ ಕುರಿತು ದಾಖಲಾದ ಪ್ರಕರಣ ಆಧರಿಸಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಾಗಮ್ಮ ಗಿಡ್ಡಪ್ಪ ಹಾಗೂ ಜೆ. ಪುಟ್ಟಪ್ಪ ಎಂಬುವವರನ್ನು ರಾಯಬಾಗ ಠಾಣೆ ಪೊಲೀಸರು ಬಂಧಿಸಿ ಆರೋಪಿಗಳಿಂದ 10 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ‌ಬಂಧಿಸಿದ ಸಿಬ್ಬಂದಿಗಳ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.