ಬೆಳಗಾವಿ : ಗ್ರಾಮೀಣ ಭಾಗದ ಜನ ಹಾಗೂ ಜಾನುವಾರುಗಳಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಾಣ ಮಾಡಲಾದ ನೀರಾವರಿ ಕಾಲುವೆಗಳನ್ನು ನೆಲಸಮ ಮಾಡುವ ಮೂಲಕ ಅಟ್ಟಹಾಸ ಮೆರೆದಿರುವ ಘಟನೆ ಸಚಿವ ಲಕ್ಷ್ಮಣ ಸವದಿ ತವರಿನಲ್ಲಿ ನಡೆದಿದೆ.
ಹೌದು ಅಥಣಿ ಪಟ್ಟಣದ ಕೂದಲೆಳೆ ಅಂತರದಲ್ಲಿರುವ ಸಂಕೋನಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆ ಕಾಲುವೆಯನ್ನು ನೆಲಸಮಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಕಾಲುವೆ ಪಕ್ಕದ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದು ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಧ್ಯ ಕಾಲುವೆ ಒತ್ತುವರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಸಂಕೋನಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಸ್ಥಳಿಯರು.
ಗ್ರಾಮದ ಪ್ರಕಾಶ್ ಮಿರ್ಜಿ ಎಂಬುವವರು ಕಾಲುವೆ ಒತ್ತುವರಿ ಮಾಡಿಕೊಂಡಿದ್ದು ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸಯವಂತೆ ಆಗ್ರಹಿಸಿ ಈಗಾಗಲೇ ಗ್ರಾಮದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನೂ ಸಚಿವ ಲಕ್ಷ್ಮಣ ಸವದಿ ತವರಿನಲ್ಲಿ ಇಷ್ಟೊಂದು ಅನಾಚಾರ ನಡೆದರೂ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.



