ಕೊಪ್ಪಳ: ನಾನು ಗುಡಿ- ಗುಂಡಾರ, ದೇವಸ್ಥಾನಕ್ಕೆ ಹೋವುದಿಲ್ಲ. ನಾನು ಮಾಠಮಾನ್ಯಗಳಿಗೆ ಹೆಚ್ಚು ಹೋಗುವುದಿಲ್ಲ. ಆದರೆ, ನನಗೆ ಹಜ್ ಯಾತ್ರೆಗೆ ಹೋಗುವ ಆಸೆ ಇದೆ. ಆದರೆ, ಇಸ್ಲಾಂಗೆ ಮತಾಂತರ ಆಗದ ಹೊರತು ಹಜ್ ಯಾತ್ರೆ ಮಾಡಲು ಅವಕಾಶ ಇಲ್ಲದ್ದರಿಂದ ಮೆಕ್ಕಾ- ಮದೀನಾಕ್ಕೆ ಹೋಗಲು ಆಗಿಲ್ಲ ಎಂದು ಉನ್ನತ ಶಿಕ್ಷಣ ‌ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕುಕನೂರು ಪಟ್ಟಣದಲ್ಲಿ ಆಯೋಜಿಸಿದ್ದ ಪ್ರವಾದಿ ಮೋಹ್ಮದ್ ಪೈಗಂಬರ್ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾನುವಾರ ಮಾತನಾಡಿದರು.

ಇಸ್ಲಾಂ ಧರ್ಮದ ಬಗ್ಗೆ ಭಾರತ ಸೇರಿ ಜಗತ್ತಿನ ಸಾಕಷ್ಟು ರಾಷ್ಟ್ರದಲ್ಲಿ ಸಾಕಷ್ಟು ತಪ್ಪು ಕಲ್ಪನೆ ಇದೆ. ಆದರೆ, ವಾಸ್ತವದಲ್ಲಿ ಇಸ್ಲಾಂ ಅತ್ಯಂತ ಶ್ರೇಷ್ಠವಾಗಿದೆ. ಜಗತ್ತಿನ ಬೇರೆ ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ಅತ್ಯಂತ ಶ್ರೇಷ್ಠವಾದುದು.
ನಾನು ಇಸ್ಲಾಂ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದೇನೆ. ಕುರ್ ಆನ್ ಬಗ್ಗೆ ತಿಳಿದುಕೊಂಡಿದ್ದೇನೆ. ಆದ್ದರಿಂದ ಈ ಬಗ್ಗೆ ನನಗೆ ಮಾಹಿತಿ ಇದೆ. ಯಾವುದೇ ಧರ್ಮದ ಬಗ್ಗೆ ಮಾತನಾಡುವ ಮೊದಲು ಅರ್ಥ ಮಾಡಿಕೊಳ್ಳಬೇಕು.

ಕುರ್ ಆನ್ ಕೇವಲ ಮುಸ್ಲಿಂ ರಿಗೆ ಮಾತ್ರ ಬರೆದಿದ್ದಲ್ಲ. ಅದನ್ನು ಯಾರು ಬೇಕಾದರೂ ಓದಬಹುದು. ಕೊನೆಯ ಪ್ರವಾದಿ ಮಹಮ್ಮದ್ ಪೈಂಗಬರ್ ಅವರು ಇಡೀ ಬ್ರಹ್ಮಾಂಡಕ್ಕೆ ಕುರ್ ಆನ್ ಕೊಟ್ಟಿದ್ದಾರೆ ಎಂದು ಹೇಳಿದರು.