ಚಿಕ್ಕೋಡಿ : ಕುಡಿದು ಗಲಾಟೆ ಮಾಡಿದ ಆರೋಪಿಗೆ ಸಸಿ ನೆಡುವ ಶಿಕ್ಷೆ ವಿಧಿಸುವ ಮೂಲಕ ಚಿಕ್ಕೋಡಿ ಜೆಎಂಎಫ್ಸಿ ನ್ಯಾಯಾಲಯ ವಿಭಿನ್ನ ರೀತಿಯಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ಮಾಡಿದೆ.
ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ ಎಂಬಾತನ ಮೇಲೆ ಕುಡಿದು ಗಲಾಟೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು ಆರೋಪಿ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಇದೇ ಕಾರಣಕ್ಕೆ ನ್ಯಾಯಾಲಯ ಆರೋಪಿಗೆ 50 ಸಸಿ ನೆಡುವಂತೆ ಶಿಕ್ಷೆ ನೀಡಿತ್ತು.
ಕೋರ್ಟ್ ಸೂಚನೆ ಮೇರೆಗೆ ಆರೋಪಿ ತನ್ನ ಪತ್ನಿಯ ಜೊತೆ ಸೇರಿಕೊಂಡು ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಗಳನ್ನು ನೆಟ್ಟಿದ್ದಾನೆ.
ಅಪರಾಧಕ್ಕೆ ದಂಡ ಅಥವಾ ಜೈಲು ಶಿಕ್ಷೆ ನೀಡುವ ಬದಲು ಪರಿಸರ ಸಂರಕ್ಷಣೆಗೆ ಪೂರಕವಾಗುವ ರೀತಿಯಲ್ಲಿ ಶಿಕ್ಷೆ ವಿಧಿಸಿರುವ ಚಿಕ್ಕೋಡಿ ನ್ಯಾಯಾಲಯದ ತೀರ್ಪು ಸಾರ್ವಜನಿಕರ ಗಮನ ಸೆಳೆದಿದೆ. ‘ತಪ್ಪಿಗೆ ಶಿಕ್ಷೆ, ಪರಿಸರಕ್ಕೆ ಕೊಡುಗೆ’ ಎಂಬ ಸಂದೇಶ ಸಾರುವಂತಿರುವ ಈ ತೀರ್ಪು ಪರಿಸರ ಕಾಳಜಿಯ ದೃಷ್ಟಿಯಿಂದ ವಿಶೇಷವಾಗಿದೆ.
9480804117


