
ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ ; ಸಿಎಂ ತವರಲ್ಲೇ ಅಮಾನವೀಯ ಘಟನೆ

ಮೈಸೂರು : ದಲಿತರು ಮಾದಿಗ ಸಮುದಾಯದ ಜನರು ಅದೇ ಗ್ರಾಮದ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಸಿಎಂ ತವರೂರು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ದಲಿತರ ಮಾದಿಗ ಸಮುದಾಯದ ಕುಟುಂಬಕ್ಕೆ ಅದೇ ಮಾದಿಗ ಸಮುದಾಯದವರು ಸೇರಿ ನಾಲ್ಕು ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ. ಈ ಘಟನೆ ಸಿಎಂ ಹುಟ್ಟೂರು ಸಿದ್ದರಾಮನ ಹುಂಡಿ ಗ್ರಾಮದಿಂದ ಕೂಗಳತೆ ದೂರದಲ್ಲಿನ ಶ್ರೀನಿವಾಸಪುರದಲ್ಲಿ ನಡೆದಿದೆ.
ಶ್ರೀನಿವಾಸಪುರ ಗ್ರಾಮದಲ್ಲಿ ಇರುವುದೆಲ್ಲಾ ಮಾದಿಗ ಸಮುದಾಯದ ಜನ. ಸುರೇಶ್ ಕುಟುಂಬಕ್ಕೆ ಅವರದೇ ಮಾದಿಗ ಸಮುದಾಯದ ಜನರು ನಾಲ್ಕು ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಸುರೇಶ್‌ಗೆ ಗ್ರಾಮದ ಹಿರಿಯರು 16 ಸಾವಿರ ರೂ. ದಂಡ ಹಾಕಿದ್ದರು.
ದಂಡ ಕಟ್ಟಲು ಶಕ್ತಿ ಇಲ್ಲದ ಸುರೇಶ್ ದಂಡ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಇಷ್ಟಕ್ಕೇ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಊರಿನ ದೇವಸ್ಥಾನಕ್ಕೆ ಈ ಕುಟುಂಬಕ್ಕೆ ಪ್ರವೇಶವಿಲ್ಲ. ಊರ ದೇವರ ಮೆರವಣಿಗೆ ವೇಳೆ ದೇವರ ಉತ್ಸವ ಇವರ ಮನೆ ಮುಂದೆ ನಿಲ್ಲುವಂತಿಲ್ಲ.
ಗ್ರಾಮದಲ್ಲಿ ಯಾರೂ ಈ ಕುಟುಂಬದವರನ್ನು ಮಾತಾಡಿಸುವ ಹಾಗಿಲ್ಲ. ಕೂಲಿಗೆ ಕರೆಯುವಂತಿಲ್ಲ. ಮನೆಯಲ್ಲಿ ಯಾರಾದರೂ ಸತ್ತರೆ ಹೆಣ ಹೊರಲು ಯಾರೂ ಹೋಗುವಂತಿಲ್ಲ ಎಂದು ನಿಯಮ ಜಾರಿ ಮಾಡಿ ಬಹಿಷ್ಕಾರ ಹಾಕಿದ್ದಾರೆ.